ಮಂಜೇಶ್ವರ, ಸೆ 30 (Daijiworld News/MSP): ಮಂಜೇಶ್ವರ ಉಪಚುನಾವಣೆಗೆ ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ , ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಹಾಗೂ ಮುಖಂಡರಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಸೆ. 29 ರ ಭಾನುವಾರ ರಾಜ್ಯ ಬಿಜೆಪಿ ಸಮಿತಿಯು ಸಭೆ ಸೇರಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ರವೀಶ ತಂತ್ರಿ ಕುಂಟಾರು ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಭಾನುವಾರ ಮಂಜೇಶ್ವರದಲ್ಲಿ ನಡೆದ ಪಕ್ಷದ ಚುನಾವಣಾ ಸಮಾಲೋಚನಾ ಸಭೆಗೆ ಆಗಮಿಸಿದ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ಗಣೇಶ್ ಅವರನ್ನು ತಡೆಹಿಡಿದು ಕಾರ್ಯಕರ್ತರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ , ಮುಖಂಡ ಸುರೇಶ್ ಕುಮಾರ್ ಶೆಟ್ಟಿ, ವಿ ಬಾಲಕೃಷ್ಣ ಶೆಟ್ಟಿ ಮುಂತಾದವರ ಸಮ್ಮುಖದಲ್ಲಿ ನಡೆದ ಕಾರ್ಯಕರ್ತರ ಪ್ರತಿಭಟನೆಯು ಸಭೆಯಲ್ಲಿ ಗೊಂದಲವನ್ನು ಸೃಷ್ಟಿಮಾಡಿತ್ತು. ಈ ನಡುವೆ ಗೊಂದಲವನ್ನು ವರದಿ ಮಾಡಿಲು ತೆರಲಿದ ಖಾಸಗಿ ನ್ಯೂಸ್ ವಾಹಿನಿಯ ಕ್ಯಾಮೆರಾಮೆನ್ ಮೇಲೆ ಹಲ್ಲೆಯೂ ನಡೆದಿತ್ತು.
ಟಿಕೆಟ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತರ ಹೆಸರನ್ನು ಕೊನೆಗಳಿಗೆಯಲ್ಲಿ ಕೈಬಿಟ್ಟದ್ದೇ ಕಾರ್ಯಕರ್ತರ ಹಾಗೂ ಸ್ಥಳೀಯ ನಾಯಕರ ಅಕ್ರೋಶಕ್ಕೆ ಕಾರಣವೆನ್ನಲಾಗಿದೆ. ಸ್ಥಳೀಯ ನಾಯಕರ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಕಡೆಗಣಿಸಿ ರಾಜ್ಯ ಸಮಿತಿಯು ರವೀಶ ತಂತ್ರಿಗೆ ಟಿಕೇಟು ನೀಡಿದೆ ಎಂಬ ಅರೋಪ ಮಂಜೇಶ್ವರ ಕ್ಶೇತ್ರದೆಲ್ಲೆಡೆ ಕೇಳಿಬರುತ್ತಿದ್ದು ಅಸಮಾಧಾನಗೊಂಡಿರುವ ಸ್ಥಳೀಯ ಕಾರ್ಯಕರ್ತರು ಹಾಗೂ ನಾಯಕರು ಚುನಾವಣಾ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೊದಲು ಅಭ್ಯರ್ಥಿ ಘೋಷಣೆಯ ವಿಚಾರದಲ್ಲಿ ನಡೆದ ವಿಳಂಬವು ಕಾರ್ಯಕರ್ತರನ್ನು ಕೆರಳಿಸಿತ್ತು. ಕುಂಬಳೆ, ಮೀಂಜ, ಮಂಗಲ್ಪಾಡಿ ಹಾಗೂ ಪುತ್ತಿಗೆ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಾರ್ಯಕರ್ತ ಹಾಗೂ ನಾಯಕರಗೆ ರವೀಶ ತಂತ್ರಿಯನ್ನು ಅಭ್ಯರ್ಥಿಯಾಗಿ ಘೋಷಿದ್ದ ರಾಜ್ಯ ಸಮಿತಿಯ ನಿರ್ಧಾರದಲ್ಲಿ ಸಹಮತವಿಲ್ಲ ಎಂದು ತಿಳಿದುಬಂದಿದೆ.