ಬಂಟ್ವಾಳ, ಸೆ 28 (Daijiworld News/MSP): ಮಂಗಳೂರಿನ ಪಾಂಡೇಶ್ವರದ ಮಾಲ್ ಒಂದರಲ್ಲಿ ಯುವಕನೊಬ್ಬ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಿ, ಬಂಟ್ವಾಳ ನಗರ ಠಾಣೆಗೆ ಅಬ್ದುಲ್ ರಹಿಮಾನ್ ಎಂಬವರು ದೂರು ನೀಡಿದ್ದಾರೆ.
ಸೆ. 25 ರಂದು ಮಂಜುನಾಥ್ ಎಂಬಾತ ಮಂಗಳೂರಿನ ಮಾಲ್ ನಲ್ಲಿ ನೀಡಿದ ಹೇಳಿಕೆಯ ವಿಡಿಯೋ ಪ್ರಸಾರವಾಗಿದ್ದು ತನ್ನ ಸಮುದಾಯಕ್ಕೆ ನೋವುಂಟಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಏನಾಗಿತ್ತು?
ಮಾಲ್ನಲ್ಲಿ ಸೆ. 25 ರ ಬುಧವಾರ ವಿದ್ಯಾರ್ಥಿಗಳ ತಂಡ ಯುವತಿಯರನ್ನು ಚುಡಾಯಿಸುತ್ತಿದ್ದು, ಈ ವೇಳೆ ಯುವಕನೋರ್ವ ಈ ಬಗ್ಗೆ ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ‘ನಮ್ಮನ್ನು ಪ್ರಶ್ನಿಸಲು ನೀನ್ಯಾರು’ ಎಂದು ವಿದ್ಯಾರ್ಥಿಗಳ ಗುಂಪು ಯುವಕನಿಗೆ ಅವರನ್ನು ಮರು ಪ್ರಶ್ನಿಸಿದ್ದಾರೆ. ಆಗ ‘ಇದು ಹಿಂದು ರಾಷ್ಟ್ರ’ ಎಂದು ಯುವಕ ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೆರಳಿದ ವಿದ್ಯಾರ್ಥಿಗಳು ಇನ್ನೊಮ್ಮೆ ಹೇಳುವಂತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮುಂದುವರಿದಾಗ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದರು. ಬಳಿಕ ಅದನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿ ವೈರಲ್ ಮಾಡಿದ್ದರು. ಆ ಬಳಿಕ ಯುವಕ ಹಲ್ಲೆ ನಡೆಸಿದವರ ವಿರುದ್ದ ಪೊಲೀಸ್ ದೂರು ದಾಖಲಿಸಿದ್ದ. ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿ ಸೇರಿದಂತೆ ಒಟ್ಟು 7 ಮಂದಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದರು. 6 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಾಲಕನನ್ನು ಬಾಲಮಂಡಳಿಗೆ ಹಾಜರುಪಡಿಸಿದ್ದು, ರಿಮಾಂಡ್ ಹೋಂಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಬಂಧಿತರು ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದರು.
ಶಾಂತಿನಗರ ಕಾವೂರಿನ ಮೊಯಿಯುದ್ದೀನ್ ಸಫ್ವಾನ್ (19), ಮಂಜೇಶ್ವರ ನಿವಾಸಿ ಅಬ್ದುಲ್ ರಹಿಮ್ ಸಾದ್ (19), ತೌಡುಗೋಳಿ ನಿವಾಸಿ ಮೊಹಮ್ಮದ್ ಮರ್ಝಕ್ (19), ಬಸ್ತಿಪಡ್ಪು ನಿವಾಸಿ ಫರಾನ್ ಫಾರೂಕ್ (19), ಮಂಜೇಶ್ವರ ನಿವಾಸಿ ಸಾರಿಕ್ ಫರಾನ್ (19), ಪಾಂಡೇಶ್ವರ ನಿವಾಸಿ ಷಹಲ್ ಬಿಲ್ (19) ಹಾಗೂ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದರು.