ಮಂಗಳೂರು, ಸೆ 28 (Daijiworld News/RD): ಸ್ವಚ್ಛ ಭಾರತದ ಧ್ಯೇಯದೊಂದಿಗೆ, ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವಿನೂತನ ಕ್ರಮವನ್ನು ಕೈಗೊಂಡಿದೆ.
ಪ್ರತಿನಿತ್ಯ ಮನೆಯಲ್ಲಿ ಬಳಕೆ ಮಾಡಿದ ಹಾಲಿನ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್ಗಳನ್ನು ನಾವು ಖರೀದಿಸಿದ ಅಂಗಡಿಗೆ ಮರಳಿ ನೀಡುವ ಮೂಲಕ ವಿತರಕರು ಇದನ್ನು ಸಂಗ್ರಹಿಸಿ ಮರುಸಂಸ್ಕರಣಾ ಘಟಕಕ್ಕೆ ನೀಡುವುದಾಗಿದೆ. ಹೀಗಾಗಿ ಖಾಲಿ ಹಾಲಿನ ಪ್ಯಾಕ್ ಅನ್ನು ಮರಳಿ ಅಂಗಡಿಗೆ ನೀಡಲು ಕೆ ಎಮ್ ಫ್ ಸೂಚಿಸಿದೆ. ಈ ಮೂಲಕ ಅಂಗಡಿಯಲ್ಲಿ ನಾವು ಖರೀದಿಸಿದ ನಂದಿನಿ ಹಾಲು ಅಥವಾ ಇನ್ನಿತರ ಪ್ಯಾಕೆಟ್ ಮತ್ತೆ ಮರು ಬಳಕೆ ಮಾಡಲು ಸಾಧ್ಯವಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿರಾಜ್ ಹೆಗ್ಡೆ, ಸ್ಚಚ್ಚತಾ ಹೀ ಸೇವಾ 2019 ಎಂಬ ಯೋಜನೆಯನ್ನು ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಹಾಗೂ ವಿತರಿಕರಿಗೆ ಜಾಗೃತಿ ಮೂಡಿಸಿ ನಂದಿನಿ ಹಾಲಿನ ಉಪಯೋಗಿಸಿದ ಪ್ಯಾಕೆಟ್ ಮತ್ತು ಸಿಪಿಪಿ ಬಾಟಲ್ಗಳನ್ನು ವಿತರಕರ ಮೂಲಕ ಹಿಂಪಡೆದು ಮರು ಸಂಸ್ಕರಿಸುವ ಯೋಜನೆಯನ್ನು ಅಕ್ಟೋಬರ್ 2 ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಒಟ್ಟು 1650 ಡೀಲರ್ ಗಳಿಂದ 104 ಹಾಲು ವಿತರಣಾ ವಾಹನಗಳ ಮೂಲಕ ಪ್ರತಿನಿತ್ಯ ಬಳಕೆ ಮಾಡಿದ ಪ್ಲಾಸ್ಟಿಕ್ ಮತ್ತು ಸಿಪಿಪಿ ಬಾಟಲ್ಗಳನ್ನು ಒಕ್ಕೂಟವು ಸಂಗ್ರಹಿಸಿ, ಮೆ| ನೇಚರ್ ಫ್ರೆಂಡ್ಲಿ ರೀಸೈಕಲ್ ಇಂಡಸ್ಟ್ರೀಸ್ ಆ್ಯಂಡ್ ಡ್ರೈ ವೇಸ್ಟೇಜ್ ಹ್ಯಾಂಡ್ಲಿಂಗ್ ನಲ್ಲಿ ಮರುಸಂಸ್ಕರಣೆ ಮಾಡಲಾಗುತ್ತದೆ. ಹಾಗಾಗಿ ಮಂಗಳೂರು ನಗರದ ವಿತರಕರು ಹಾಗೂ ಗ್ರಾಹಕರು ನಂದಿನಿ ಪ್ಲಾಸ್ಟಿಕ್ ಮತ್ತು ಸಿಪಿಪಿ ಬಾಟಲ್ಗಳನ್ನು ಸಂಗ್ರಹಿಸಿಟ್ಟುಕೊಂಡು ನೇರವಾಗಿ ಈ ಮರು ಸಂಸ್ಕರಣ ಘಟಕಕ್ಕೆ ನೀಡಬಹುದು ಎಂದು ಹೇಳಿದ್ದಾರೆ.