ಮಂಗಳೂರು, ಸೆ 27(DaijiworldNews/SM): ರೈಲು ಪ್ರಯಾಣಿಕರ ಮೊಬೈಲ್ ಮತ್ತು ಹ್ಯಾಂಡ್ ಬ್ಯಾಗ್ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಕೊಂಕಣ ರೈಲ್ವೆ ನಿಗಮದ ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ.
ಕೇರಳದ ಕಣ್ಣೂರ್ ನಿವಾಸಿಗಳಾದ ಶಫೀಕ್ ಮತ್ತು ಸಿ.ಪಿ. ಸಿಯಾದ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಮೂರು ಮೊಬೈಲ್ ಫೋನ್ ಗಳು ಹಾಗೂ 10,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ವಿವರ:
ತಿರುವನಂತಪುರಂ- ಹಝರತ್ ನಿಝಾಮುದ್ದೀನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಮತ್ತು ಇತರ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಲಾಗುತ್ತಿದೆ ಎಂದು ಬುಧವಾರ ತಿರುವನಂತಪುರಂನಿಂದ ಕೋಟಕ್ಕೆ ‘ಬಿ2’ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಅರ್ಪಿತ್ ಅಲೆಗ್ಸಾಂಡರ್ ಎಂಬವರು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪಿದಾಗ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಟಿಟಿಇ ಗಜಾನನ ಬಿ. ಭಟ್ ಅವರು ರೈಲಿನ ಬೋಗಿಯಲ್ಲಿ ಕುಳಿತಲ್ಲಿ ಕುಳಿತುಕೊಳ್ಳದೆ ಆಚೀಚೆ ಸಂಚರಿಸುತ್ತಿರುವ ಇಬ್ಬರು ಶಂಕಿತ ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರಬೇಕೆಂದು ಸಂಶಯ ವ್ಯಕ್ತ ಪಡಿಸಿದ್ದರು.
ಬಳಿಕ ಕಾರವಾರದಲ್ಲಿರುವ ರೈಲ್ವೆ ಇಲಾಖೆಯ ಸಬ್ ಇನ್ಸ್ಪೆಕ್ಟರ್ ರೈಲಿನ ಸ್ಥಿತಿಯನ್ನು ಆನ್ಲೈನ್ ಮೂಲಕ ಪರಿಶೀಲನೆ ನಡೆಸಿದಾಗ ಇಬ್ಬರು ಶಂಕಿತ ಯುವಕರು ರೈಲಿನಲ್ಲಿ ಅತ್ತಿಂದಿತ್ತ ಓಡಾಡುತ್ತಾ ಜನರಲ್ ಬೋಗಿಗಳಿಗೆ ಪ್ರವೇಶ ಮಾಡುತ್ತಿರುವುದು ಕಂಡು ಬಂದಿತ್ತು.
ಕ್ರಾಸಿಂಗ್ನಲ್ಲಿ ರೈಲು ನಿಲ್ಲುವ ಸಂದರ್ಭ ಈ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯುವಂತೆ ಉಡುಪಿ ಜಿಲ್ಲೆಯ ಸೇನಾಪುರ ರೈಲ್ವೆ ಸ್ಟೇಷನ್ ಮಾಸ್ಟರ್ಗೆ ಸೂಚಿಸಿದ್ದರು. ಕ್ರಾಸಿಂಗ್ನಲ್ಲಿ ರೈಲು ನಿಂತಾಗ ಒಬ್ಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತನ ಬಳಿ ಅರ್ಪಿತ್ ಅಲೆಗ್ಸಾಂಡರ್ರಿಂದ ಕದ್ದ ಮೊಬೈಲ್ ಪತ್ತೆಯಾಗಿತ್ತು.
ಬಳಿಕ ಇನ್ನೊಬ್ಬ ಶಂಕಿತನನ್ನು ಭಟ್ಕಳದಲ್ಲಿ ವಶಕ್ಕೆ ಪಡೆದು ಎರಡು ಮೊಬೈಲ್ ಗಳನ್ನು ಮತ್ತು ನಗದು ಮೊತ್ತವನ್ನು ವಶಪಡಿಸಿಕೊಳ್ಳಲಾಯಿತು ಎಂದು ಕೊಂಕಣ ರೈಲ್ವೆ ನಿಗಮ ತಿಳಿಸಿದೆ.