ಮಂಗಳೂರು, ಸೆ 27(DaijiworldNews/SM): ರಾಜ್ಯ ದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಮಂಗಳೂರು ದಸರಾ ಮಹೋತ್ಸವ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9 ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ಸಿನ ಹಿರಿಯ ನಾಯಕ ಜನಾರ್ಧನ ಪೂಜಾರಿ ಹೇಳಿದ್ದಾರೆ.
ಕುದ್ರೋಳಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ವರ್ಷ ಮಂಗಳೂರು ದಸರಾ ವೈಭವದಿಂದ ನಡೆಯುತ್ತಿದೆ. ಅದರಲ್ಲೂ ಈ ಬಾರಿ ಬಹಳ ವಿಶೇಷತೆಯಾಗಿ ಅಕ್ಟೋಬರ್ 8ರಂದು ನಡೆಯಲಿರುವ ಶೋಭಾಯಾತ್ರೆಯಲ್ಲಿ ಶಾರದಾ ದೇವಿಯ ಮೂರ್ತಿ ಆರಂಭದಲ್ಲಿ ಇರಲಿದ್ದು, ಬಳಿಕ ಉಳಿದ ಟ್ಯಾಬ್ಲೋಗಳು ಹಿಂದಿನಿಂದ ಸಾಗಲಿದೆ ಎಂದರು.
ಇನ್ನು, ಈ ಬಾರಿಯ ದಸರಾ ಕಾರ್ಯಕ್ರಮದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಕ್ಷೇತ್ರದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿದೆ. ಸೆ.29ರಂದು ಗುರು ಪ್ರಾರ್ಥನೆಯೊಂದಿಗೆ ಆರ್ಅಂಭಗೊಂಡು ನವದುರ್ಗೆಯರ ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ನವರಾತ್ರಿಯ ಪ್ರತೀ ದಿನ ಕ್ಷೇತ್ರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.