ಉಡುಪಿ, ಸೆ 27 (Daijiworld News/MSP): ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಮತ್ತು ಸರ್ಕಾರ ಉಳಿಸಿಕೊಳ್ಳಲು ಹೋರಾಟ ಮಾಡ್ತಿದೆ. ಜನರಿಗಾಗಿ ಯಾವ ಕೆಲಸವನ್ನೂ ಮಾಡಿಲ್ಲ. ಸದ್ಯದಲ್ಲಿ ಕಾಂಗ್ರೆಸ್ ಯಾವ ರಾಜ್ಯದಲ್ಲೂ ಎದ್ದು ನಿಲ್ಲುವ ಪರಿಸ್ಥಿಯಲ್ಲಿಲ್ಲ. ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಹೇಳಿದರು.
ಅವರು ಇಂದು ಶುಕ್ರವಾರ, ಕಡಿಯಾಳಿಯಲ್ಲಿರುವ ನಗರ ಬಿಜೆಪಿ ಕಚೇರಿಯಲ್ಲಿ ಪಕ್ಷದ ನಾಯಕರಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ, 'ಈ ಸಂದರ್ಭದಲ್ಲಿ ಬಿಜೆಪಿಯ ಜವಾಬ್ದಾರಿ ಇನ್ನಷ್ಟು ಹೆಚ್ಚಾಗುತ್ತೆ. ಜನ ನಮ್ಮನ್ನ ಗಮನಿಸ್ತಾ ಇರ್ತಾರೆ. ರಾಜಕೀಯದಲ್ಲಿ ಪ್ರಜಾ ರಾಜಕಾರಣ ಮತ್ತು ಅಧಿಕಾರ ರಾಜಕಾರಣ ಎಂದು ಎರಡು ವಿಧ ಇದೆ. ಬಿಜೆಪಿ ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ನಾವು ಜನ ಹಿತಕ್ಕಾಗಿ ರಾಜಕೀಯ ಮಾಡಿದ್ದೆವೆ. ಆದ್ದರಿಂದಲೇ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ'. ನಾವು ಬೆಳೆಸಿಕೊಂಡ ಆದರ್ಶಗಳು, ವಿಚಾರಗಳನ್ನು ಅಧಿಕಾರಕ್ಕೆ ಬಂದಾಗ ಅನುಷ್ಠಾನ ಮಾಡುವುದೇ ಒಂದು ಸವಾಲು. ಅದರ ನೈತಿಕತೆಯನ್ನು ಹೊರಬೇಕು. ಉಡುಪಿ ಸುಸಂಸ್ಕೃತ ಜಿಲ್ಲೆ, ಸ್ವಾಭಿಮಾನದ ಜನರು. ಇಲ್ಲಿ ಅಭಿವೃದ್ದಿಗೆ ವಿಫುಲ ಅವಕಾಶವಿದೆ. ಕೈಗಾರಿಕೆ, ಮೂಲಭೂತ ಸೌಕರ್ಯ ಒದಗಿಸುವುದು ಇತ್ಯಾದಿ.
ಪಕ್ಷದ ಮುಖ್ಯ ಉದ್ದೇಶವೆಂದರೆ ಪಕ್ಷದ ಕಟ್ಟ ಕಡೆಯ ಹಿತರಕ್ಷಣೆಯನ್ನು ಕಾಪಾಡುವುದು. ಇನ್ನು ಮುಂದೆ ಪಕ್ಷದ ಕಾರ್ಯಕರ್ತನ ದ್ವನಿಯಾಗಿ ದುಡಿಯುವುದಾಗಿ ಬೊಮ್ಮಾಯಿ ಭರವಸೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸಕಾರದಿಂದ ಸಾಕಷ್ಟು ಅನುದಾನ ತರುವಲ್ಲಿ ಶ್ರಮಿಸುತ್ತೇನೆ, ಎಂದರು.ಈ ಸಂದರ್ಭದಲ್ಲಿ ಬೊಮ್ಮಾಯಿಯವರು ತಮ್ಮ ಗುರುಗಳಾದ ದಿವಂಗತ ವಿ ಎಸ್ ಆಚಾರ್ಯ, ಎ ಜಿ ಕೊಡ್ಗಿಯವರ ಆರ್ಥಿಕ ಸಹಾಯವನ್ನು ನೆನೆದರು.
ಉಡುಪಿ ಶಾಸಕರಾದ ರಘುಪತಿ ಭಟ್ ಮಾತನಾಡಿ, 'ಈಗ ಸುವರ್ಣಯುಗ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿಯಾಗುತ್ತದೆ ಎಂಬ ಭರವಸೆ ಇದೆ' ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನಗರ ಬಿಜೆಪಿ ಅಧ್ಯಕ್ಷ ಪ್ರಬಾಕರ ಪೂಜಾರಿ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಂದ್ಯಾ ರಮೇಶ್, ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಸುಕುಮಾರ್ ಶೇಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅದ್ಯಕ್ಷ ದಿನಕರ್ ಬಾಬು, ಯಶ್ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.