ಮಂಗಳೂರು, ಸೆ 27 (Daijiworld News/MSP): ಪಾನಮತ್ತಾಗಿದ್ದ ವ್ಯಕ್ತಿಯೋರ್ವನೊಂದಿಗಿದ್ದ ಪುಟ್ಟ ಬಾಲಕನನ್ನು ಚೈಲ್ಡ್ಲೈನ್ ಅಧಿಕಾರಿಗಳು ರಕ್ಷಿಸಿದ ಘಟನೆ ಸೆ. 26 ರ ಗುರುವಾರ ರಾತ್ರಿ 10:30ಕ್ಕೆ ನಡೆದಿದೆ. ನಗರದ ಲೇಡಿಗೋಶನ್ ಆಸ್ಪತ್ರೆಯ ಬಳಿ ಪಾನಮತ್ತಾಗಿ ಅರೆಪ್ರಜ್ಞೆಯಲ್ಲಿದ್ದಂತೆ ವರ್ತಿಸುತ್ತಿದ್ದ ವ್ಯಕ್ತಿ ಬಳಿ 6 ವರ್ಷ ಪ್ರಾಯದ ಗಂಡು ಮಗುವೊಂದು ಆತಂಕಕೊಂಡು ಕುಳಿತಿರುವುದನ್ನು ಕಂಡ ಸಾರ್ವಜನಿಕರಿಂದ ಚೈಲ್ಡ್ಲೈನ್ (1098)ಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಚೈಲ್ಡ್ಲೈನ್ ಸಿಬ್ಬಂದಿಗಳು, ಬಂದರು ಠಾಣಾ ಪೊಲೀಸ್ ಸಿಬ್ಬಂದಿಯ ಸಹಕಾರದಿಂದ ಸ್ಥಳಕ್ಕೆ ತೆರಳಿ ಗಂಡುಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಸೂಕ್ತ ಪುನರ್ವಸತಿ ಕಲ್ಪಿಸಿದ್ದಾರೆ.
ಬಾಲಕನ ತಂದೆಯೇ ಪಾನಮತ್ತರಾಗಿರುವುದು ಕಂಡುಬಂದಿದ್ದು , ಆತನ ಬಳಿ ಯಾವುದೇ ದಾಖಲೆಗಳು ಕಂಡುಬಂದಿಲ್ಲದ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ವಾಗ್ವಾದ ಮಾಡಿದ ಹಿನ್ನಲೆಯಲ್ಲಿ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಈತ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬನ್ನಿಗುಡ್ಡೆ ನಿವಾಸಿ ಎನ್ನಲಾಗಿದೆ. ಚೈಲ್ಡ್ಲೈನ್ನ ಸದಸ್ಯ ಕೀರ್ತೇಶ್ ಕಲ್ಮಕಾರ್, ಸ್ವಯಂ ಸೇವಕ ರಂಜಿತ್ ಕಾಡುತೋಟ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.