ಬೆಳ್ತಂಗಡಿ, ಸೆ 26 (DaijiworldNews/SM): ಬುಧವಾರ ಸಂಜೆಯ ವೇಳೆ ಚಾರ್ಮಾಡಿ ಘಾಟಿಯಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಚರಂಡಿಗಳು ಹೂಳಿನಿಂದ ತುಂಬಿ ಹೋಗಿದ್ದು ಕೆಲವಡೆ ಹಿಂದೆ ಕುಸಿದಿದ್ದ ಮಣ್ಣು ಇದೀಗ ರಸ್ತೆಗೆ ಬಂದಿದ್ದು ಅದನ್ನು ತೆರವುಗೊಳಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲವಾಗಿದ್ದು ಘಾಟಿಯ ಎರಡು ಭಾಗಗಳಲ್ಲಿ ಎರಡು ಜೆಸಿಬಿಗಳನ್ನು ಹಾಗೂ ಟಿಪ್ಪರ್ ಗಳನ್ನು ಇರಿಸಲಾಗಿದ್ದು ಮುಂಜಾಗ್ರತೆ ವಹಿಸಲಾಗಿದೆ.
ಘಾಟಿಯಲ್ಲಿ ಹಲವಾರು ಕಡೆಗಳಲ್ಲಿ ಹಿಂದೆ ಭೂ ಕುಸಿತವಾಗಿದ್ದು ಕುಸಿದ ಮಣ್ಣು ಹಾಗೂ ಕಲ್ಲುಗಳು ಅಲ್ಲಿಯೇ ಉಳಿದುಕೊಂಡಿದೆ. ರಸ್ತೆಬದಿಯಲ್ಲಿ ಸರಿಯಾದ ಚರಂಡಿಯೂ ಇಲ್ಲದ ಕಾರಣದಿಂದಾಗಿ ಮಳೆ ನೀರು ಹಾಗೂ ಮಣ್ಣು ರಸ್ತೆಗೆ ಹರಿದು ಬರುತ್ತಿದ್ದೆ. ಅದನ್ನು ತೆರವು ಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಘಾಟಿಯಲ್ಲಿ ಕೆಲವೆಡೆ ರಸ್ತೆ ಅತ್ಯಂತ ಕಿರಿದಾಗಿದ್ದು ಒಂದೇ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಇದೀಗ ಹಗಲು ಹೊತ್ತಿನಲ್ಲಿ ಮಾತ್ರ ವಾಹನಗಳಿಗೆ ಅವಕಾಶವಿದ್ದು ಅತೀ ಅಗತ್ಯವಾಗಿ ಓಡಾಡುವ ವಾಹನಗಳು ಮಾತ್ರ ಸಂಚರಿಸುತ್ತಿದೆ.
ರಸ್ತೆಯಲ್ಲಿ ತಾತ್ಕಾಲಿಕ ಕಾಮಗಾರಿಗಳನ್ನು ಮಾತ್ರ ಮಾಡಲಾಗಿದ್ದು ರಸ್ತೆಯ ಮರು ನಿರ್ಮಾಣಕ್ಕೆ ಇನ್ನು ಕ್ರಮ ಕೈಗೊಳ್ಳಬೇಕಾಗಿದೆ. ಈಗಿನ ಸ್ಥಿತಿಯಲ್ಲಿ ಮಳೆ ಬಿಟ್ಟರೂ ಘಾಟಿಯಲ್ಲಿ ಬಸ್ ಹಾಗೂ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಒದಗಿಸುವುದು ಅಸಾಧ್ಯವಾಗಿದ್ದು ರಸ್ತೆಯ ಮರು ನಿರ್ಮಾಣದ ಕಾರ್ಯ ನಡೆದರೆ ಮಾತ್ರ ಘನ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಲಿದೆ.