ಉಡುಪಿ, ಸೆ 26 (DaijiworldNews/SM) : ಮೀನುಗಾರರ ಸಾಲ ಮನ್ನಾ ಯೋಜನೆಯಡಿ ಯಲ್ಲಿ 2017-18 ಮತ್ತು 2018-19ನೇ ಸಾಲಿನಲ್ಲಿ ಮೀನುಗಾರರಿಗೆ, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳು ಶೇ 2, ಶೇ 3 ಹಾಗೂ ಶೂನ್ಯ ಬಡ್ಡಿದರದಲ್ಲಿ ವಿತರಿಸುವ ಸಾಲಗಳು ಮನ್ನಾ ಆಗಲಿದ್ದು, ಆರ್ಹ ಫಲಾನುಭವಿಗಳಿಗೆ ಸಾಲ ಮರು ಪಾವತಿಗಾಗಿ ಬ್ಯಾಂಕ್ಗಳಿಂದ ಯಾವುದೇ ಒತ್ತಡ ಹೇರುವಂತಿಲ್ಲಾ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೀನುಗಾರರ ಸಾಲ ಮನ್ನಾ ಕುರಿತು ಅಧಿಕಾರಿಗಳು ಮತ್ತು ಮೀನುಗಾರಿಕಾ ಸಂಘಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, 2017-18 ಮತ್ತು 2018-19ನೇ ಸಾಲಿನಲ್ಲಿ ಮೀನುಗಾರರಿಗೆ ನೀಡಲಾದ 50,000 ರೂಪಾಯಿ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಸಾಲ ಮರು ಪಾವತಿಗಾಗಿ ಬ್ಯಾಂಕ್ಗಳಿಂದ ಒತ್ತಡ ಬರುತ್ತಿದೆ ಎಂದು ಮೀನುಗಾರರು ತಿಳಿಸಿದ್ದು, ಈ ಬಗ್ಗೆ ತಿಳಿಸುವಂತೆ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗೆ ಸಚಿವರು ಸೂಚಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ರುದ್ರೇಶ್ ಮಾತನಾಡಿ, ಈ ಬಗ್ಗೆ ತಮಗೆ ಸಹ ದೂರು ಬಂದಿದ್ದು, ಮೀನುಗಾರರ ಸಾಲ ಮನ್ನಾ ಫಲಾನುಭವಿಗಳಿಗೆ ಸಾಲ ಪಾವತಿಸುವಂತೆ ಒತ್ತಡ ಹೇರದಂತೆ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೇ ಸಾಲ ಮನ್ನಾ ಯೋಜನೆಯ ವ್ಯಾಪ್ತಿಗೆ ಬರುವ ಫಲಾನುಭವಿಗಳು ಏಪ್ರಿಲ್ 2019 ರಿಂದ ಸಾಲ ಮರು ಪಾವತಿಸಿದ್ದಲ್ಲಿ ಸದ್ರಿ ಮೊತ್ತ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಹಾಗೂ ಒಂದು ಕುಟುಂಬದಲ್ಲಿ ಒಬ್ಬ ಫಲಾನುಭವಿ ಮಾತ್ರ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ. ಆದರೆ ಮೀನುಗಾರರು ಸಹಕಾರಿ ಸಂಘಗಳಿಂದ ಪಡೆದ ಸಾಲ ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
ಮೀನುಗಾರರಿಗೆ ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾತ್ರ ಸಾಲ ನೀಡುತ್ತಿದ್ದು, ಎಲ್ಲಾ ಬ್ಯಾಂಕ್ ಗಳಲ್ಲೂ ಸಾಲ ನೀಡುವಂತೆ ಮತ್ತು ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನೂ ಸಹ ಮನ್ನಾ ಮಾಡುವಂತೆ ಮತ್ತು ಸಾಲ ಮನ್ನಾ ಕುರಿತ ಪ್ರಕ್ರಿಯೆಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಸಭೆಯಲ್ಲಿ ನೆರೆದಿದ್ದ ಮೀನುಗಾರ ಸಂಘಗಳ ಪದಾಧಿಕಾರಿಗಳು ಆಗ್ರಹಿಸಿದರು.
ಮೀನುಗಾರರಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ವಿತರಣೆ ಕುರಿತಂತೆ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡುವುದಾಗಿ ಮತ್ತು ಸಾಲ ಮನ್ನಾ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸುವುದಾಗಿ ತಿಳಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್, ಸಮಸ್ಯೆಗಳಿದ್ದಲ್ಲಿ ನೇರವಾಗಿ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.