ಮಂಗಳೂರು, ಸೆ 26 (Daijiworld News/MSP): ನಗರದ ರಥಬೀದಿಯಲ್ಲಿ ಬುಧವಾರ ಬೆಳಿಗ್ಗೆ ಸಂಶಯಾಸ್ಪದ ಕಾರೊಂದು ಪತ್ತೆಯಾಗಿದೆ. ಮಂಗಳೂರು ಉತ್ತರ (ಬಂದರು) ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ನಡುವೆ ಅದೇ ದಿನ ಬೆಳ್ಳಂಬೆಳಗೆ ವ್ಯಕ್ತಿಯೋರ್ವನನ್ನು ದರೋಡೆ ಮಾಡಿ ಬಳಿಕ ಕಾರನ್ನೊಂದನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವ ವಿಡೀಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಎರಡು ಘಟನೆಗಳಿಗೂ ಒಂದಕ್ಕೊಂದು ಸಂಬಂಧ ಇದೆಯೇ ಎಂದು ತಿಳಿದುಬಂದಿಲ್ಲ.
ಬುಧವಾರ ರಥಬೀದಿ ರಸ್ತೆ ಮತ್ತು ಕುದ್ರೋಳಿ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಉಷಾ ಕಿರಣ ಹೋಟೆಲ್ ಎದುರಿನಲ್ಲಿ ಆಲ್ಟೊ ಕಾರೊಂದನ್ನು ನಿಲ್ಲಿಸಿ ಹೋಗಲಾಗಿದೆ. ಕಾರಿಗೆ ನೋಂದಣಿ ಸಂಖ್ಯೆಯ ಫಲಕವೇ ಇರಲಿಲ್ಲ. ನೋಂದಣಿ ಸಂಖ್ಯೆ ಇಲ್ಲದ ಕಾರು ದೀರ್ಘಕಾಲದಿಂದ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಮಂಗಳೂರು ಉತ್ತರ ಠಾಣೆ ಪೊಲೀಸರು ಕಾರನ್ನು ಪರಿಶೀಲಿಸಿದ್ದಾರೆ. ಅಲ್ಲಿ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬಳಿಕ ವಾಹನವನ್ನು ಪೊಲೀಸರು ವಶಕ್ಕೆ ಪಡೆದರು. ಅಪರಾಧ ಕೃತ್ಯಕ್ಕೆ ಬಳಸಿರುವ ಕಾರನ್ನು ತಂದು ನಿಲ್ಲಿಸಿ ಹೋಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನಾಮಧೇಯ ಕಾರು ಪತ್ತೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ‘ರಥಬೀದಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದ ಕಾರಿನ ಕುರಿತು ಪೊಲೀಸರು ಕೆಲವು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ತನಿಖೆ ಮುಂದುವರಿದಿದೆ’ ಎಂದಿದ್ದಾರೆ.