ಮಂಗಳೂರು, ಸೆ 26 (Daijiworld News/MSP): ನಗರದ ಭವಂತಿ ಸ್ಟ್ರೀಟ್ನಲ್ಲಿರುವ ಅರುಣ ಜುವೆಲ್ಲರ್ಸ್ ಎಂಬ ಚಿನ್ನದ ಮಳಿಗೆಯ ಗೋಡೆಗೆ ಕನ್ನ ಕೊರೆದು 90 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳ ಬಂಧಿಸಿದ್ದಾರೆ. ತನಿಖೆ ವೇಳೆ ಅಫ್ಘಾನ್ ಮೂಲದ ಅಂತರಾಷ್ಟ್ರೀಯ ಮಟ್ಟದ ತಂಡ ಬಳಸಿ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸೆ.26 ರ ಗುರುವಾರ ನಗರದಲ್ಲಿ ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು. ದರೋಡೆ ನಡೆಸಿದ ಕೃತ್ಯದಲ್ಲಿ ಅಫ್ಘಾನ್ ಮೂಲದ ಅಂತರಾಷ್ಟ್ರೀಯ ಮಟ್ಟದ ತಂಡ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಆರೋಪಿ ಕೇರಳ ಮೂಲದ ಮುಹ್ತಸಿಮು ಅಲಿಯಾಸ್ ತಸ್ಲಿಮ್ (39) ಸೇರಿ ಅಪ್ಘಾನ್ ಮೂಲದ ವಾಲಿ ಮೊಹಮ್ಮದ್ ಶಾಫಿ (45), ಮಹಮ್ಮದ್ ಅಜೀಮ್ ಕುರಾಮ್ (25) ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇವರಲ್ಲದೆ ಕೇರಳದ ಕುನ್ಹಿ ಅಹ್ಮದ್ ಮತ್ತು ಅಪ್ಪ್ಘಾನ್ ನ ಫರೀದ್ ಸೇರಿ ಇಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ
ಘಟನೆ ವಿವರ: ಅರುಣ ಜುವೆಲ್ಲರ್ಸ್ ಮಾಲೀಕ ಅನಿಲ್ ಶೇಟ್ ಅವರು ತಮ್ಮ ಚಿನ್ನಾಭರಣ ಮಳಿಗೆಯನ್ನು ಸೆ. 1 ರ ಭಾನುವಾರ ಮಧ್ಯಾಹ್ನ ಮುಚ್ಚಿ ಹೋಗಿದ್ದರು. ಸೆ.2 ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಳಿಗೆ ತೆರೆದಿರಲಿಲ್ಲ. ಸೆ. 3ರ ಬೆಳಗ್ಗೆ ಮಳಿಗೆ ತೆರೆಯುವಾಗ ಕಳ್ಳತನ ನಡೆದಿರುವುದು ತಿಳಿದುಬಂದಿತ್ತು. ಜುವೆಲ್ಲರಿಯ ಹಿಂಭಾಗದಲ್ಲಿ ಸುಮಾರು ಎರಡು ಅಡಿ ಚೌಕದ ಅಳತೆಯಲ್ಲಿದುಷ್ಕರ್ಮಿಗಳು ಗೋಡೆ ಕೊರೆದಿದ್ದು, ಕಿಂಡಿಯಿಂದ ಒಳ ಪ್ರವೇಶಿಸಿದ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಮಳಿಗೆಯಲ್ಲಿ ಸುಮಾರು 90 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ವಿನ್ಯಾಸದ ಚಿನ್ನಾಭರಣಗಳು ಕಳವು ಮಾಡಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. .
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ, ಶ್ವಾನದಳ, ಬೆರಳಚ್ಚು ತಜ್ಞರ ಮೂಲಕ ತನಿಖೆ ಆರಂಭಿಸಿದ್ದರು. ಮಾತ್ರವಲ್ಲದೆ ಮಳಿಗೆ ಹಾಗೂ ಪಕ್ಕದ ಸಿಸಿ ಕ್ಯಾಮೆರಾಗಳ ಫೂಟೇಜ್ ಪಡೆದುಕೊಂಡಿದ್ದರು. ದರೋಡೆಯ ಪ್ರಮುಖ ಆರೋಪಿ ಮುಹ್ತಸಿಮು ವಿರುದ್ದ ಕಾಸರಗೋಡು ಹಾಗೂ ಬೇಕಲ ಠಾಣೆಯಲ್ಲಿ ಸುಮಾರು ಹನ್ನೆರಡು ಪ್ರಕರಣಗಳು ದಾಖಲಾಗಿದೆ. ಈತ ಭೂಗತ ಲೋಕದೊಂದಿಗೆ ಹಾಗೂ ದುಬೈನಲ್ಲಿ ತಲೆಮರೆಸಿಕೊಂಡಿರುವ ಪಾತಕಿ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ.
ಇಬ್ಬರು ಅಫ್ಘಾನ್ ಪ್ರಜೆಗಳ ವಿರುದ್ದ ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಾಗಿದೆ ಎಂದು ತಿಳಿದುಬಂದಿದೆ. ಬಂಧಿತ ಎಲ್ಲ ಆರೋಪಿಗಳನ್ನು ಸೆ. 24 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಂಧಿತರಲ್ಲಿ ಇಬ್ಬರು ಅಫ್ಘಾನ್ ಪ್ರಜೆಗಳಾಗಿರುವುದರಿಂದ, ಪ್ರೋಟೋಕಾಲ್ ಪ್ರಕಾರ ಅಫ್ಘಾನಿಸ್ತಾನದ ರಾಯಭಾರ ಕಚೇರಿಗೆ ರವಾನೆ ಮಾಡಿದ್ದು, ಬಂಧನದ ಬಗ್ಗೆ ವರದಿಯನ್ನು ನವದೆಹಲಿಯ ವಿದೇಶಾಂಗ ವ್ಯವಹಾರಗಳ ಉಪ ಕಾರ್ಯದರ್ಶಿಗೆ ರವಾನಿಸಲಾಗಿದೆ.