ವರದಿ: ಮೌನೇಶ್ ವಿಶ್ವಕರ್ಮ
ಬಂಟ್ವಾಳ, ಸೆ 26 (Daijiworld News/MSP): ಇತ್ತೀಚೆಗೆ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ವಿಟ್ಲದ ಶಾಮಿಯಾನ ಅಂಗಡಿ ಕೆಲಸದ ಯುವಕ ಹಾಗೂ ಅಂಗಡಿ ಮಾಲಕನ ಆತ್ಮೀಯತೆ, ಸೌಹಾರ್ದ ಸಂಬಂಧದ ಬಗ್ಗೆ ಮೆಚ್ಚುಗೆಯ ಮಾತುಗಳ ಬರಹವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಬಾಬಣ್ಣ ಮತ್ತು ಫಾರೂಕ್
ವಿಟ್ಲದ ಪ್ರಿಯಾ ಶಾಮಿಯಾನದ ಮಾಲಕ ಹಾಗೂ ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ.(ಬಾಬಣ್ಣ) ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೊಡಂಗಾಯಿ ನಿವಾಸಿ ಎಂ.ಕೆ.ಉಮರ್ ಫಾರೂಕ್ ಎಂಬವರು ಇತ್ತೀಚೆಗೆ ಅಡ್ಯನಡ್ಕ ಸಮೀಪದಲ್ಲಿ ಮನೆಯ ಮಹಡಿಯಲ್ಲಿ ನಿದ್ರೆ ಮಾಡಲು ಏರಿದ್ದ ವೇಳೆ ಆಕಸ್ಮಿಕವಾಗಿ ಕೆಳಗಡೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಬಾಬಣ್ಣ ಅವರು ಫಾರೂಕ್ ಅವರ ಕೊನೆಯುಸಿರವರೆಗೂ ಅವರ ಜತೆಯಲ್ಲಿ ಆಸ್ಪತ್ರೆಯಲ್ಲಿದ್ದರು. ಅವರ ಆಸ್ಪತ್ರೆಯ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಅದಲ್ಲದೆ, ಬಾಬಣ್ಣ ಅವರು ಫಾರೂಕ್ ಅವರ ಜೀವ ಉಳಿಸಲು ಕೊನೆಯವರೆಗೂ ನಡೆಸಿರುವ ಪ್ರಯತ್ನ ಹಾಗೂ ಕಣ್ಣೀರು ಹಾಕಿದ ಸನ್ನಿವೇಶಗಳ ಬರಹವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಾನವೀಯ ಸಂಬಂಧ, ಸೌಹಾರ್ದದ ಸಂದೇಶವಾಗಿ ಹರಿದಾಡುತ್ತಿದೆ.
ಸಹೋದರತೆಗೂ ಮೀರಿದ ಸಂಬಂಧ: ಇತ್ತೀಚೆಗೆ ಮರಣ ಹೊಂದಿದ ಫಾರೂಕ್ ಕೊಡಂಗಾಯಿ ಸುಮಾರು 10 ವರ್ಷಗಳಿಂದ ಬಾಬಣ್ಣ ಅವರ ಬಳಿಯೇ ಕೆಲಸ ಮಾಡಿಕೊಂಡಿದ್ದರು. ಅದಲ್ಲದೆ, ಊರಿನ ಇನ್ನೂ ನಾಲ್ವರು ಯುವಕರು ಬಾಬಣ್ಣ ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಮಾಲಕ ಹಾಗೂ ಕೆಲಸದಾಳು ಎಂಬ ಯಾವುದೇ ಭೇದ ಭಾವ ಇರುತ್ತಿರಲಿಲ್ಲ. ಬಾಬಣ್ಣ ಎಲ್ಲ ಕೆಲಸದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಈ ಪೈಕಿ ಫಾರೂಕ್ ಅವರ ಜೊತೆ ಸಹೋದರತೆಗೂ ಮೀರಿದ ಸಂಬಂಧ ಹೊಂದಿದ್ದರು ಎಂದು ಇವರಿಬ್ಬರ ಒಡನಾಟವನ್ನು ಫಾರೂಕ್ ಅವರ ಸ್ನೇಹಿತ ಹಾರಿಸ್ ಕೊಡಂಗಾಯಿ ಸ್ಮರಿಸಿಕೊಳ್ಳುತ್ತಾರೆ.
ಆಸ್ಪತ್ರೆಯ ಬಿಲ್ ಪಾವತಿಸಲು ಬಿಡಲಿಲ್ಲ:
‘‘ಫಾರೂಕ್ ಮೂರು ದಿನಗಳ ಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭ ಜೊತೆಗಿದ್ದ ನಾವು ಕೆಲಕಾಲ ಅಲ್ಲಿಂದ ತೆರಳಿದ್ದರೂ ಬಾಬಣ್ಣ ಮಾತ್ರ ಅಲ್ಲಿಯೇ ತಂಗಿದ್ದರು. ಫಾರೂಕ್ ಅವರನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಅವರು ಮಾಡಿದ್ದರು. ಚಿಕಿತ್ಸೆ ಫಲಿಸದೆ ಫಾರೂಕ್ ಕೊನೆಯುಸಿರೆಳೆದ ಸಂದರ್ಭ ಚಿಕಿತ್ಸಾ ವೆಚ್ಚ ಒಟ್ಟು 2.80 ಲಕ್ಷ ರೂ. ಅನ್ನು ಬಾಬಣ್ಣ ಅವರೇ ಪಾವತಿಸಿದ್ದರು. ಅಲ್ಲದೆ ಸುಮಾರು 25 ಸಾವಿರ ರೂ. ಇತರ ಖರ್ಚು ಕೂಡಾ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ನನ್ನ ಸಹೋದರ ಬಿಲ್ವೊಂದನ್ನು ಪಾವತಿಸಿದ್ದ. ಇದನ್ನು ಅರಿತ ಬಾಬಣ್ಣ ಆ ಬಿಲ್ ಮೊತ್ತವನ್ನು ಸಹೋದರನಿಗೆ ನೀಡಿದ್ದರು. ಫಾರೂಕ್ಗಾಗಿ ಎಷ್ಟೇ ಖರ್ಚಾದರೂ ನಾನೆ ನೋಡಿಕೊಳ್ಳುವೆ ಎಂದು ಜಿನುಗುತ್ತಿದ್ದ ಕಣ್ಣೀರಿನ ನಡುವೆಯೇ ಹೇಳಿದ್ದರು’’ ಎಂದು ಗೆಳಯನನ್ನು ಕಳೆದುಕೊಂಡು ದುಃಖದಲ್ಲಿರುವ ಫಾರೂಕ್ ಸ್ನೇಹಿತ ಹಾರಿಸ್ ಕೊಡಂಗಾಯಿ ತಿಳಿಸಿದ್ದಾರೆ.
ಬಾಬಣ್ಣರಿಗೆ ಫಾರೂಕ್ ಅವರ ಬಗ್ಗೆ ಎಲ್ಲಿಲ್ಲದ ಪ್ರೀತಿ. ಫಾರೂಕ್ ನಿಧನರಾದಾಗ ನೊಂದು ಕಣ್ಣೀರಿಟ್ಟಿದ್ದಾರೆ. ಅವರನ್ನು ದಫನ ಮಾಡಿದ ಸ್ಥಳಕ್ಕೆ ಬಾಬಣ್ಣ ಹೋಗಿ ಬರುತ್ತಾರೆ. ದಫನ ಮಾಡುವ ಸಂದರ್ದಲ್ಲಿ ಮಸೀದಿಗೆ ಬಂದಿದ್ದ ಬಾಬಣ್ಣ ಅವರು ಫಾರೂಕ್ ಅವರ ಸಾಲವನ್ನು ತಾನೇ ತೀರಿಸುವ ಭರವಸೆ ನೀಡಿದ್ದರು ಎಂದು ಹಾರಿಸ್ ಕೊಡಂಗಾಯಿ ಹೇಳಿದರು.
ರಮಝಾನ್ ತಿಂಗಳಲ್ಲಿ ಸಂಬಳ ಸಹಿತ ರಜೆ:
ಬಾಬಣ್ಣ ಅವರ ಬಳಿ ನಾಲ್ಕೈದು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರು ಮುಸ್ಲಿಮ್ ಯುವಕರು. ಶಾಮಿಯಾನದ ಕೆಲಸ ಇಲ್ಲದ ಬಿಡುವು ಸಂದರ್ಭದಲ್ಲಿ ಬಾಬಣ್ಣ ಅವರ ತೋಟದಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ರಮಝಾನ್ ತಿಂಗಳಲ್ಲಿ ಇವರಿಗೆ ಸಂಬಳ ಸಹಿತ ರಜೆ ನೀಡುತ್ತಿದ್ದರು. ಅದಲ್ಲದೆ, ಫಾರೂಕ್ ಅವರ ವಿವಾಹ ಸಂದರ್ಭ ಬಾಬಣ್ಣ ಆರ್ಥಿಕವಾಗಿ ತುಂಬಾ ಸಹಾಯ ಮಾಡಿದ್ದಾರೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಫಾರೂಕ್ ಅವರೇ ಊಟ ಮಾಡಿ ಎಲ್ಲರಿಗೂ ಬಡಿಸುತ್ತಿದ್ದರು. ಮಹಡಿಯಿಂದ ಬಿದ್ದು ಗಾಯಗೊಳ್ಳುವ ಸ್ವಲ್ಪ ಮುಂಚೆಯೂ ಫಾರೂಕ್ ಅವರು ಬಾಬಣ್ಣರಿಗೆ ಊಟ ಸಿದ್ಧಪಡಿಸಿ ಬಡಿಸಿದ್ದರು. ಆ ಸನ್ನಿವೇಶವನ್ನು ನೆನದು ಬಾಬಣ್ಣ ಈಗಲೂ ಗದ್ಗಿತರಾಗುತ್ತಾರೆ ಎಂದು ಹಾರಿಸ್ ತಿಳಿಸಿದ್ದಾರೆ. ಧರ್ಮಾಂಧತೆಯ ಅಮಲಿನಲ್ಲಿ ದ್ವೇಷ ಬಿತ್ತುವವರಿಗೆ, ಜಾತಿ ಧರ್ಮದ ಹೆಸರಿನಲ್ಲಿ ಶತ್ರುಗಳಾದ ಎಲ್ಲರಿಗೂ ಫಾರೂಕ್ ಮತ್ತು ಬಾಬಣ್ಣರ ಸ್ನೇಹ ಮಾದರಿಯಾಗಲಿ. ನಿಮ್ಮ ಮಾದರಿ ಮಾನವೀಯಯ ಸಂಬಂಧಕ್ಕೆ ‘ಲಾಕೋ ಸಲಾಂ ಬಾಬಣ್ಣ’ ಎನ್ನುವ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.