ಕುಂದಾಪುರ, ಸೆ 26 (Daijiworld News/RD): ಅನರ್ಹ ಶಾಸಕರಿಂದಲೇ ಬಿ.ಜೆ.ಪಿ ಸರ್ಕಾರ ಆಡಳಿತಕ್ಕೆ ಬರಲು ಕಾರಣವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಹೆಚ್ಚಿನ ಆದ್ಯತೆ ನೀಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಮತ್ತು ಸುಪ್ರೀಂಕೋರ್ಟ್ ಆದೇಶ ನೋಡಿ ಅನರ್ಹ ಅಭ್ಯರ್ಥಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಶಿವಮೊಗ್ಗ ನಗರದ ಬಿ.ಜೆ.ಪಿ ಕಾರ್ಯಕರ್ತರು ಮತ್ತು ಈಶ್ವರಪ್ಪ ಅಭಿಮಾನಿಗಳ ಹರಕೆಯಂತೆ ನಡೆದ ಚಂಡಿಕಾಯಾಗದಲ್ಲಿ ಪತ್ನಿ ಜಯಲಕ್ಷ್ಮೀ ಮತ್ತು ಪುತ್ರಿ ಕನಕ ಅವರೊಂದಿಗೆ ಪಾಲ್ಗೊಂಡರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಅನ್ನಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ಶ್ರೀಪತಿ ಅಡಿಗ ಮತ್ತು ಜಯರಾಮ ಪುರಾಣಿಕರ ನೇತೃತ್ವದಲ್ಲಿ ಚಂಡಿಕಾಯಾಗ ಜರಗಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿ, ಅನರ್ಹ ಶಾಸಕರಿಂದಲೇ ಬಿ.ಜೆ.ಪಿ ಸರ್ಕಾರ ಬರಲು ಕಾರಣವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಹೆಚ್ಚಿನ ಆದ್ಯೆಯೆತೆ ನೀಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಮತ್ತು ಸುಪ್ರೀಂಕೋರ್ಟ್ ಆದೇಶ ನೋಡಿ ಅನರ್ಹ ಅಭ್ಯರ್ಥಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಉಪಚುನಾವಣೆಯಲ್ಲಿ 15ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದರು. ಶಿವಮೊಗ್ಗ ನಗರದ ಬಿ.ಜೆ.ಪಿ ಕಾರ್ಯಕರ್ತರು ನಮ್ಮ ಮೇಲಿನ ಅಭಿಮಾನದಿಂದ ಪಕ್ಷದ ಮತ್ತು ದೇಶದ ಒಳಿತಿಗಾಗಿ ಚಂಡಿಕಾಯಾಗ ಹಮ್ಮಿಕೊಂಡಿದ್ದು, ಇದರಲ್ಲಿ ಭಾಗವಹಿಸಿ ಸಂತೋಷವಾಯಿತು ಎಂದರು.
ಈಗಾಗಲೇ ಬೆಳಗಾವಿಯಲ್ಲಿ ಕಚೇರಿ ಉತ್ತರ ಕರ್ನಾಟಕದ ಜನತೆಗೆ ಅನುಕೂಲವಾಗುವಂತೆ ಬೆಳಗಾವಿಯ ವಿನಿವಿಧಾನಸೌಧದಲ್ಲಿಯೇ ಗ್ರಾಮೀಣಾಭಿವೃದ್ಧಿ ಕಚೇರಿಯನ್ನು ತೆರೆಯಲು ಅನುಮತಿ ಕೋರಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರಾಕೃತಿಕ ವಿಕೋಪಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ ಎಂದರು. ಗ್ರಾಮೀಣಾಭಿವೃದ್ದಿಗಾಗಿ ಕರಾವಳಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ ಅವರು ಮಂದಾರ್ತಿ ದೇವಸ್ಥಾನದ ಸುತ್ತಮುತ್ತ ಇರುವ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು ಎಂದರು.
ಈ ವೇಳೆ ದೇವಳದ ಅನುವಂಶಿಕ ಮೊಕ್ತೇಸರ ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್, ಈಶ್ವರಪ್ಪ ಪರವಾಗಿ ಸೇವಾಕರ್ತರಾದ ಸಂದ್ಯಾ, ನಾಗರಾಜ್, ರಾಘವೇಂದ್ರ, ಸ್ವರೂಪ್, ಹೆಗ್ಗುಂಜೆ ಗ್ರಾ.ಪಂ ಅಧ್ಯಕ್ಷರಾದ ಗಣೇಶ್ ಶೆಟ್ಟಿ, ಸದಸ್ಯ ಪ್ರವೀಣ್ ಶೆಟ್ಟಿ, ದೇವಳದ ಅನುವಂಶಿಕ ಮೊಕ್ತೇಸರರು ಉಪಸ್ಥಿತರಿದ್ದರು.