ಮಂಗಳೂರು, ಸೆ.26(Daijiworld News/SS): ಯುವತಿಯರನ್ನು ನಂಬಿಸಿ, ಅತ್ಯಾಚಾರ ಮಾಡಿ ಸೈನೈಡ್ ಬಳಸಿ ಕೊಲೆ ಮಾಡಿದ್ದ ಸರಣಿ ಹಂತಕ ಸೈನೈಡ್ ಮೋಹನ್ಗೆ 16ನೇ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಕೊಲೆ ಕೃತ್ಯಕ್ಕಾಗಿ ಸೆಕ್ಷನ್ 302 ಅಡಿಯಲ್ಲಿ ಜೀವಾವಧಿ ಹಾಗೂ 25 ಸಾವಿರ ರೂ. ದಂಡ, ವಿಷ ಉಣಿಸಿದ ಕೃತ್ಯಕ್ಕಾಗಿ ಸೆಕ್ಷನ್ 328 ಅಡಿಯಲ್ಲಿ 10 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ಚಿನ್ನಾಭರಣ ಸುಲಿಗೆ ಪ್ರಕರಣದಲ್ಲಿ ಸೆಕ್ಷನ್ 392 ಕೃತ್ಯಕ್ಕೆ 5 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ, ವಂಚನೆ ನಡೆಸಿದ್ದಕ್ಕಾಗಿ ಸೆಕ್ಷನ್ 417 ಅಡಿಯಲ್ಲಿ 1 ವರ್ಷ ಕಠಿಣ ಸಜೆ, ಸಾಕ್ಷ್ಯ ನಾಶಕ್ಕಾಗಿ ಸೆಕ್ಷನ್ 201ರ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ಪಾವತಿಸಬೇಕು ಎಂದು ನ್ಯಾಯಾಧೀಶೆ ಸಯಿದುನ್ನೀಸಾ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಈ ಹಿಂದಿನ ಪ್ರಕರಣಗಳ ಶಿಕ್ಷೆ ಅನುಭವಿಸಿದ ಬಳಿಕ ಈ ಪ್ರಕರಣದ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದ್ದು, ಶಿಕ್ಷೆ ಜತೆಗೆ 45 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2007ರಲ್ಲಿ ಕೇರಳದ ಕಾಸರಗೋಡಿನ ಉಪ್ಪಳ ಮೂಲದ ಮಹಿಳೆಯ ಬಳಿ ಸುಧಾಕರ್ ಆಚಾರ್ಯ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಮೋಹನ್ ತಾನು ಅರಣ್ಯ ಇಲಾಖೆಯಲ್ಲಿ ಕೆಲಸದಲ್ಲಿರುವುದಾಗಿ ನಂಬಿಸಿದ್ದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರಿನ ಲಾಡ್ಜ್ಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡ ನಂತರ ಒಂದು ಕ್ಯಾಪ್ಸೂಲ್ ಕೊಟ್ಟು ಅದನ್ನು ತಿಂದರೆ ಗರ್ಭಿಣಿಯಾಗುವುದಿಲ್ಲ ಎಂದು ಹೇಳಿದ್ದ. ಆತನ ಮಾತನ್ನು ನಂಬಿದ ಮಹಿಳೆ ಮೋಹನ್ ಸೂಚನೆಯಂತೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಆ ಕ್ಯಾಪ್ಸೂಲ್ ತಿಂದಿದ್ದಳು. ಅದರೊಳಗೆ ಸೈನೈಡ್ ತುಂಬಿಸಿದ್ದರಿಂದ ಶೌಚಾಲಯದಲ್ಲೇ ಸಾವನ್ನಪ್ಪಿದ್ದಳು. ಈ ಪ್ರಕರಣದ ತನಿಖೆ ಇದೀಗ ನಡೆದು ಶಿಕ್ಷೆ ಘೋಷಣೆಯಾಗಿದೆ.