ಬೆಳ್ತಂಗಡಿ, ಸೆ 25 (DaijiworldNews/SM): ತಾಲೂಕಿನಲ್ಲಿ ಬುಧವಾರ ಸಂಜೆಯ ವೇಳೆ ಸುರಿದ ಭಾರೀ ಮಳೆಗೆ ಹಲವೆಡೆ ಮತ್ತೊಮ್ಮೆ ಹಾನಿಯಾಗಿದೆ. ಆದರೆ ಜನ ಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ.
ಒಂದೂವರೆ ತಿಂಗಳ ಹಿಂದಿನ ಪ್ರವಾಹ ಪೀಡಿತ ಪ್ರದೇಶಗಳಾದ ದಿಡುಪೆ ಹಾಗೂ ಚಾರ್ಮಾಡಿಯಲ್ಲಿ ಇಂದು ನದಿಗಳ ಮಟ್ಟ ಒಮ್ಮಿಂದೊಮ್ಮೆ ಏರಿಕೆಯಾಗಿದ್ದು ತೋಟಗಳಿಗೆ ಮತ್ತೆ ನೀರು ನುಗ್ಗಿದೆ. ದಿಡುಪೆ ಪರಿಸರದಲ್ಲಿ ಹೊಸದಾಗಿ ನಿರ್ಮಿಸಿದ್ದ ಕೆಲ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಸ್ಥಳೀಯರು ನೀರನ್ನು ನೋಡಿ ಒಮ್ಮೆ ಭಯ ಪಟ್ಟರು. ಆದರೆ ಎಲ್ಲಿಯೂ ಮನೆಗಳಿಗೆ ನೀರು ನುಗ್ಗಿಲ್ಲ. ಹಾಗೂ ಯಾವುದೇ ಅಪಾಯದ ಸ್ಥಿತಿಯಿಲ್ಲ.
ಸಂಜೆ ನಾಲ್ಕು ಗಂಟೆಯ ಸುಮಾರಿಗೆ ತಾಲೂಕಿನಲ್ಲಿ ಮಳೆ ಸಣ್ಣ ಮಟ್ಟದಲ್ಲಿ ಆರಂಭವಾಗಿತ್ತು. ಆದರೆ ಏಕಾಏಕಿಯಾಗಿ ನದಿಗಳಲ್ಲಿ ನೀರು ಏರಿಕೆಯಾಗಿದೆ. ಅರಣ್ಯದಲ್ಲಿ ದೊಡ್ಡ ಮಳೆ ಬಂದಿದ್ದು ಅದರಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಒಮ್ಮಿಂದೊಮ್ಮೆ ಏರಿಕೆಯಾಗಿದೆ. ದಿಡುಪೆ ಸೇತುವೆಯ ಸಮೀಪ ಹಾಗೂ ಕುಕ್ಕಾವು ಸೇತುವೆಯ ಸಮೀಪ ನದಿ ನೀರು ಹಿಂದಿನ ಪ್ರವಾಹವನ್ನು ನೆನಪಿಸುವ ರೀತಿಯಲ್ಲಿ ಉಕ್ಕಿ ಹರಿದಿದೆ.
ಮತ್ತೊಂದೆಡೆ ದಿಡುಪೆಯಲ್ಲಿಆನಡ್ಕಹಳ್ಳ ಹಾಗೂ ಸಿಂಗನಾರು ಹಲ್ಳಗಳುದಡಮೀರಿ ಹರಿದಿದೆ. ಬಾಳೆಹಿತ್ತಿಲು, ನೆಕ್ಕಿಲು, ಪುಣ್ಕೆದಡಿ, ದಡ್ಡುಗದ್ದೆ, ತೆಂಗೆತ್ತಮಾರು. ನದಿ ಬದಿಯ ತೋಟಗಳಿಗೆ ನೀರು ನುಗ್ಗಿದೆ. ದಿಡುಪೆಯಲ್ಲಿ ಹಾಗೂ ಕುಕ್ಕಾವಿನಲ್ಲಿ ಕಳೆದ ಪ್ರವಾಹದ ಸಂದರ್ಭದಲ್ಲಿ ಹಾನಿಗೆ ಈಡಾಗಿದ್ದ ರಸ್ತೆಗಳನ್ನು ಇದೀಗ ತಾನೆ ಮಣ್ಣು ಹಾಕಿ ಮರು ನಿರ್ಮಿಸಲಾಗಿತ್ತು ಈ ರಸ್ತೆಗಳು ಇದೀಗ ಬಹುತೇಕ ನೀರಿಗೆ ಕೊಚ್ಚಿ ಹೋಗಿದೆ. ನದಿ ಕೊರತಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ ನದಿ ಬದಿಯಲ್ಲಿ ಹಾಕಲಾಗಿದ್ದ ತಡೆಗೋಡೆಗಳು ಮತ್ತೆಕೊಚ್ಚಿಹೋಗಿದೆ.