ಮಂಗಳೂರು, ಸೆ 25 (DaijiworldNews/SM):ಮಂಗಳೂರು ನಗರದಿಂದ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಗಳು ಅವ್ಯವಸ್ಥೆಯಿಂದ ಕೂಡಿವೆ. ಒಂದೆಡೆ ದುಬಾರಿ ದಂಡ, ಮತ್ತೊಂದೆಡೆ ಹೊಂಡ ಗುಂಡಿಗಳಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಗಳು ಇವುಗಳ ನಡುವೆ ಸಿಲುಕಿಕೊಂಡ ಸವಾರರು ಹೈರಾಣಾಗಿಹೋಗಿದ್ದಾರೆ. ದುಬಾರಿ ದಂಡಗಳನ್ನು ಹೇರುವ ಮೊದಲು ಹೆದ್ದಾರಿಗಳನ್ನು ದುರಸ್ಥಿಗೊಳಿಸಿ ಎಂಬುವುದು ವಾಹನ ಸವಾರರ ಆಗ್ರಹವಾಗಿದೆ.
ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿದ್ದ ಹೊಂಡಗುಂಡಿಗಳಿಂದಾಗಿ ವಾಹನಸವಾರರು ಸಂಚಾರ ನಡೆಸಲು ಪರದಾಟ ನಡೆಸುತ್ತಿದ್ದಾರೆ. ಹೆದ್ದಾರಿಯ ಅವ್ಯವಸ್ಥೆಯಿಂದಾಗಿ ಹಲವಾರು ಅಪಘಾತಗಳೂ ಕೂಡ ಸಂಭವಿಸಿವೆ. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ, ಹೊಂಡ ಗುಂಡಿಗಳಾಗಿ ಅಪಘಾತಗಳು ನಡೆದು ಹಲವು ಸಾವು ನೋವುಗಳಾದ ಬಳಿಕ ಅಧಿಕಾರಿಗಳು ತಕ್ಕಮಟ್ಟಿಗೆ ಎಚ್ಚೆತ್ತುಕೊಂಡು ತಾತ್ಕಾಲಿಕ ತೇಪೆ ಕಾರ್ಯ ನಡೆಸಿದ್ದಾರೆ.
ಕ್ರಶರ್ ಹುಡಿ ಬಳಸಿ ಹೆದ್ದಾರಿಯಲ್ಲಿನ ಹೊಂಡಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯ ಮಾಡಿದ್ದಾರೆ. ಆದರೆ, ಇದು ಮಳೆ ನಿಂತ ಬಳಿಕ ಹೊಸತೊಂದು ಸಮಸ್ಯೆತನ್ನು ತಂದೊಡ್ಡಿದೆ. ಹೆದ್ದಾರಿಯಲ್ಲಿ ಹಾಕಿರುವ ಕ್ರಶಪ್ ಪುಡಿಯಿಂದಾಗಿ ಇದೀಗ ರಸ್ತೆಯುದ್ದಕ್ಕೂ ಧೂಳು ತುಂಬಿಕೊಂಡಿದೆ. ಬಂಟ್ವಾಳದ ಮೆಲ್ಕಾರ್, ಪಾಣೆಮಂಗಳೂರು ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ಇತರ ವಾಹನ ಚಾಲಕರು ಸಂಚಾರ ನಡೆಸಲು ಪರದಾಡುವಂತಾಗಿದೆ. ಇನ್ನು ಈ ಪ್ರದೇಶಗಳಲ್ಲಿ ಪಾದಚಾರಿಗಳ ಗೋಳು ಹೇಳ ತೀರದು. ಮಳೆಗಾಲದಲ್ಲಿ ಕೆಸರು ಮಿಶ್ರಿತ ತ್ಯಾಜ್ಯ ನೀರಿನ ಸಿಂಚನವಾದರೆ, ಮಳೆ ನಿಂತ ಬಳಿಕ ಧೂಳಿನ ಸಮಸ್ಯೆ. ಈ ಎಲ್ಲಾ ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಇನ್ನು ಪ್ರಮುಖ ವಿಚಾರವೆಂದರೆ, ಪ್ರತೀ ವರ್ಷ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುಂಡಿಗಳ ಸಮಸ್ಯೆ ಸಾಮಾನ್ಯವಾಗಿದೆ. ಬಳಿಕ ತೇಪ ಹಾಕಲಾಗುತ್ತದೆ. ಆದರೆ, ಇಲ್ಲಿಯ ತನಕ ಶಾಶ್ವತ ಪರಿಹಾರ ಕಾಮಗಾರಿ ಎಂಬುವುದೇ ಮರಿಚಿಕೆಯಾದಂತಿದೆ. ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಹೊಂಡಗುಂಡಿಗಳಲ್ಲಿ ಬಿದ್ದು ಎದ್ದು ಸಂಚಾರ, ಹಾಗೂ ಧೂಳಿನಲ್ಲಿ ಸಂಕಟ ವರ್ಷಂಪ್ರತಿ ಸಾಮಾನ್ಯ ಎಂಬಂತಾಗಿದೆ.
ಮಳೆಗಾಲದಲ್ಲಿ ಈ ಹೆದ್ದಾರಿಯಲ್ಲಿ ಹೊಂಡಗುಂಡಿಗಳು ನಿರ್ಮಾಣವಾಗುತ್ತವೆ ಎಂಬುವುದು ತಿಳಿದಿದ್ದರೂ ವರ್ಷಾರಂಭಕ್ಕೂ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳಲು ಆಡಳಿತ ವರ್ಗ, ಅಧಿಕಾರಿಗಳು, ಸಂಸದ, ಸಚಿವ, ಶಾಸಕರಲ್ಲಿ ಇಚ್ಛಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು, ಜನನಾಯಕರು ಕಣ್ಣು ತೆರೆಯಲಿ. ಹಾಗೂ ಹೊಂಡಗುಂಡಿಗಳಿಂದ, ಧೂಳಿನಿಂದ ಕೂಡಿದ ಹೆದ್ದಾರಿಯಿಂದ ಮುಕ್ತಿ ಒದಗಿಸಲಿ ಹಾಗೂ ಶಾಸ್ವತ ಪರಿಹಾರ ಒದಗಿಸಲಿ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.