ಕುಂದಾಪುರ, ಸೆ 25 (Daijiworld News/MSP): ವಾಹನ ಚಾಲಕರ ಮೇಲೆ ಪೊಲೀಸ್ ಅಧಿಕಾರಿಗಳ ದರ್ಪ, ಅವೈಜ್ಞಾನಿಕ ದಂಡ ವಿಧಿಸುವಿಕೆಗೆ ನಾಂದಿ ಹಾಡಿದ ಐಎಂವಿ ವಿಧೇಯಕ ತಿದ್ದುಪಡಿ ಮಸೂದೆ, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನೆನೆಗುದಿಗೆ ಬಿದ್ದಿರುವ ಪ್ಲೈ ಓವರ್ ಕಾಮಗಾರಿಯ ನಿರ್ಲಕ್ಷ್ಯತನಗಳನ್ನು ವಿರೋಧಿಸಿ ಕುಂದಾಪುರದ ಎಲ್ಲಾ ವಾಹನ ಚಾಲಕರು ಮತ್ತು ಮಾಲಕರು ಸಂಘಟಿತ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.
ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು) ಕುಂದಾಪುರ. ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್) ಕುಂದಾಪುರ ಹಾಗೂ ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಡ್ರೈವರ್ಸ್ ಅಸೋಸಿಯೇಷನ್ಸ್ (ಇಂಟಕ್) ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕುಂದಾಪುರ ತಾಲುಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಆಯೋಜಿಸಿದ ಈ ಪ್ರತಿಭಟನೆಯಲ್ಲಿ ಎಲ್ಲಾ ವಾಹನ ಚಾಲಕರು ಮತ್ತು ಮಾಲಕರು ಭಾಗವಹಿಸಿದ್ದು ವಿಶೇಷ.
ರಾಜ್ಯ ಸರ್ಕಾರದ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ ೨೦೧೯ರ ತಿದ್ದುಪಡಿ ಮಸೂದೆಯನ್ನು ವಾಪಾಸ್ಸು ಪಡೆಯಬೇಕು. ೧೫ ವರ್ಷಗಳ ಹಳೆಯ ಆಟೋಗಳನ್ನು ರದ್ದುಪಡಿಸುತ್ತಿದ್ದು, ಹಳೆಯ ಆಟೋಗಳಿಗೆ ಕಂಪೆನಿಗಳಿಂದ ದರ ನಿಗಧಿಪಡಿಸಬೇಕು. ಸರ್ಕಾರ ಪ್ರೋತ್ಸಾಹಧನ ೫೦ ಸಾವಿರಗಳನ್ನು ನೀಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯ ಒದಗಿಸಬೇಕು, ಆಟೋ ಚಾಲಕರಿಗೆ ಮನೆ, ಕಾಲೋನಿ ನಿರ್ಮಿಸಬೇಕು. ವಾಹನಗಳ ವಿಮಾ ಪ್ರೀಮಿಯಂ ದರ ಹೆಚ್ಚಳವನ್ನು ನಿಯಂತ್ರಿಸಬೇಕು ಮತ್ತು ಪ್ರತ್ಯೇಕ ಪ್ರಿಮಿಯಂ ಮಾಡಬೇಕು. ಅಸಂಘಟಿತ ಕಾರ್ಮಿಕರಾಧ ಆಟೋ ಚಾಲಕರಿಗೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ಭವಿಷ್ಯ ನಿಧಿ ಜ್ಯಾರಿಗೊಳಿಸಬೇಕು ಮತ್ತು ಪಿಂಚಣಿ ಅನುಷ್ಟಾನಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಭದ್ರತಾ ಮಂಡಳಿ ರಚನೆ ಮಾಡಬೇಕು ಮತ್ತು ಕಲ್ಯಾಣ ಯೋಜನೆಗಳನ್ನು ಜ್ಯಾರಿಗೊಳಿಸಬೇಕು. ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಶಾಸ್ತ್ರೀ ವೃತ್ತದಲ್ಲಿ ನಿಮತು ಹೋದ ಪ್ಲೈ ಓವರನ್ನು ಪೂರ್ಣಗೊಳಿಸಬೇಕು. ಮೋಟಾರು ವಾಹನ ತಿದ್ದುಪಡಿ ಮಸೂದೆ ೨೦೧೯ನ್ನು ವಾಪಾಸು ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಶಾಸ್ತ್ರೀ ವೃತ್ತದಲ್ಲಿ ಸೇರಿದಾ ನೂರಾರು ಚಾಲಕರು ಹಾಗೂ ಮಾಲಕರು ಕುಂದಾಪುರದ ಮುಖ್ಯರಸ್ತೆಯಲ್ಲಿ ಪ್ರತಿಭಟನೆಯಲ್ಲಿ ಸಾಗಿ ಮಿನಿವಿಧಾನಸೌಧದಲ್ಲಿ ತಹಸೀಲ್ದಾರ್ ತಿಪ್ಪೇಸ್ವಾಮಿ ಮುಖಾಂತರ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಿಐಟಿಯು ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ಕಾರ್ಯದರ್ಶಿ ರಾಜು ದೇವಾಡಿಗ, ಬಿಎಂಎಸ್ ಅಧ್ಯಕ್ಷ ಸುರೇಶ್ ಪುತ್ರನ್, ಕಾರ್ಯದರ್ಶಿ ಭಾಸ್ಕರ, ಇಂಟಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ಉದಯ ಮಾಣಿ ಮನವಿ ನೀಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.