ಕಾರ್ಕಳ, ಸೆ 24 (DaijiworldNews/SM): ಮಹಿಳೆಯೊಬ್ಬರಿಗೆ ಪತಿ ಹಾಗೂ ಆತನ ಮನೆ ಮಂದಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮಂಗಳೂರು ಬಿಜೈ ಮ್ಯೂಸಿಯಂ ರೋಡ್ನ ನಿವಾಸಿಯಾಗಿರುವ ಮಹಿಳೆ ಪ್ರಕರಣದ ದೂರುದಾರರು.
2015 ಎಪ್ರಿಲ್ 30ರಂದು ಅವರು ಕಾರ್ಕಳ ಸಾಲ್ಮರ್ ನಿವಾಸಿ ಅರವಿಂದ ಶೆಣೈ ಎಂಬವರನ್ನು ವಿವಾಹವಾಗಿದ್ದರು. ಬಳಿಕ ಪತಿ ಅರವಿಂದ ಶೆಣೈಯವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಈ ದಂಪತಿಗೆ ಒಂದು ಗಂಡು ಮಗುವಿದೆ. ಮದುವೆಯಾದ ನಂತರದ ದಿನದಲ್ಲಿ ದಾಂಪತ್ಯ ವಿರಸ ಉಂಟಾಗಿತ್ತು. ಈ ಬೆಳವಣಿಗೆಯ ನಂತರ ಚೈತ್ರಾ ಅವರಿಗೆ ಪತಿ ಅರವಿಂದ ಶೆಣೈ ಅವಾಚ್ಯವಾಗಿ ಬೈದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.
ತನ್ನನ್ನು ಹಾಗೂ ಮಗುವನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣದಿಂದ ಆಕೆ ಗಂಡನ ಮನೆಯಾದ ಕಾರ್ಕಳದಲ್ಲಿ ವಾಸ್ತವ್ಯವಾಗಿದ್ದಳು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪತಿ ಅರವಿಂದ ಶೆಣೈ, ಮಾವ ರಮಾನಂದ ಶೆಣೈ ಮತ್ತು ಮೈದುನ ಆಶ್ವಿನ್ ಶೆಣೈರವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.