ಕಾಸರಗೋಡು, ಸೆ 24 (Daijiworld News/MSP): ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಮೇಲೆ ನಡೆದ ದಾಳಿ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿದೆ. ಕೃತ್ಯ ನಡೆದು ಒಂದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದೀಗ ಪ್ರಕರಣವನ್ನು ಕ್ರೈಂ ಬ್ರಾಂಚ್ ಪೊಲೀಸರಿಗೆ ಒಪ್ಪಿಸಲಾಗಿದೆ. ಆರೋಪಿಗಳ ಬಂಧನ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಪ್ರತಿಭಟನೆಗೂ ಮುನ್ನೆಚ್ಚರಿಕೆ ನೀಡಲಾಗಿತ್ತು . ಮಾತ್ರವಲ್ಲದೆ ಜಿಲ್ಲಾಧಿಕಾರಿ ಕಚೇರಿ ಮತ್ತು ಎಸ್ . ಪಿ ಕಚೇರಿ ಪರಿಸರದಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು.
ಇದರ ಜೊತೆಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿದೆ. ಆಗಸ್ಟ್ 19 ರಂದು ಮುಂಜಾನೆ ಚರ್ಚ್ ಮೇಲೆ ದಾಳಿ ನಡೆದಿತ್ತು, ಬೈಕ್ ನಲ್ಲಿ ಬಂದ ಇಬ್ಬರ ಪೈಕಿ ಓರ್ವ ಆವರಣದೊಳಗೆ ನುಗ್ಗಿ ಚರ್ಚ್ ಮೇಲೆ ಕಲ್ಲೆಸೆದಿದ್ದನು . ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸರು ಭೇಟಿ ನೀಡಿ ಶೀಘ್ರ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು .
ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು , ಜನಪ್ರತಿನಿಧಿಗಳು ಭೇಟಿ ನೀಡಿ ಕೃತ್ಯವನ್ನು ಖಂಡಿಸಿ ಆರೋಪಿಗಳ ಬಂಧಿಸುವಂತೆ ಒತ್ತಡ ಹೇರಿದ್ದರು .ಕೃತ್ಯ ನಡೆದ ದಿನವೇ ಬೇಡಡ್ಕ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಉತ್ತಮ್ ದಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಹಲವರನ್ನು ವಿಚಾರಗೆ ಒಳಪಡಿಸಿದರೂ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ. ಆರೋಪಿಗಳ ಬಂಧನ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಭಟನೆ ಕೇಳಿಬರುತ್ತಿತ್ತು . ಪ್ರತಿಭಟನೆಯ ಮುನ್ನೆಚ್ಚರಿಕೆ ಲಭಿಸುತ್ತಿದ್ದಂತೆ ತನಿಖೆ ಕ್ರೈಂ ತನಿಖೆಗೆ ಆದೇಶ ನೀಡಲಾಗಿದೆ.
ತನಿಖೆಯನ್ನು ಕ್ರೈಮ್ ಬ್ರಾಂಚ್ ಗೆ ಒಪ್ಪಿಸಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆಥೋಲಿಕ್ ಸಭಾ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಿದ್ದ ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಮುಂದೂಡಲಾಗಿದೆ. ಆರೋಪಿಗಳನ್ನು ಬಂಧಿಸಲು ವಿಫಲವಾದಲ್ಲಿ ಮತ್ತೆ ಪ್ರತಿಭಟನೆಗೆ ಮುಂದಾಗುವುದಾಗಿ ಕೆಥೋಲಿಕ್ ಸಭಾ ತಿಳಿಸಿದೆ.