Karavali
ಉಡುಪಿ: 'ರಾಜ್ಯದ ಬಿಜೆಪಿ ಸಂಸದರು, ಮೋದಿ-ಶಾರ ಕೂಲಿಯಾಳುಗಳಾಗಿ ವರ್ತಿಸುತ್ತಿದ್ದಾರೆ' - ಕಾಂಗ್ರೆಸ್
- Tue, Sep 24 2019 12:28:41 PM
-
ಉಡುಪಿ, ಸೆ 24 (Daijiworld News/RD): ರಾಜ್ಯದ ಜನತೆ ಭೀಕರ ಪ್ರವಾಹದಿಂದ ಸಂತ್ರಸ್ಥರಾಗಿ ಎರಡು ತಿಂಗಳು ಕಳೆದರೂ ಕೇಂದ್ರದಿಂದ ಬಿಡಿ ಕಾಸು ಬಿಡುಗಡೆಯಾಗಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು ಪ್ರಧಾನಿ ಮೋದಿ-ಶಾರ ಕೂಲಿಯಾಳುಗಳಾಗಿ ವರ್ತಿಸುತ್ತಿದ್ದಾರೆ ಎಂದು ಖ್ಯಾತ ನ್ಯಾಯವಾದಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ರೀ ಸುಧೀರ್ ಕುಮಾರ್ ಮುರೋಳಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಜನತೆ ಬೀಕರ ಪ್ರವಾಹದಿಂದ ಸಂತ್ರಸ್ಥರಾಗಿ ಎರಡು ತಿಂಗಳು ಕಳೆದರೂ ಕೇಂದ್ರದಿಂದ ಬಿಡಿ ಕಾಸು ಬಿಡುಗಡೆಯಾಗಿಲ್ಲ. ರಾಜ್ಯದಿಂದ ಆಯ್ಕೆಯಾದ 25 ಬಿಜೆಪಿ ಎಂ.ಪಿ.ಗಳು, ಮೋದಿ-ಶಾರ ಕೂಲಿಯಾಳುಗಳಾಗಿ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗಂತೂ ಅಮಿತ್ ಶಾನ ಕಣ್ಣು ನೋಡುವ ಧೈರ್ಯವಿಲ್ಲ. ದೆಹಲಿಗೆ ಹೋದವರು ಅವರ ಕಣ್ಣು ನೋಡಿ ಓಡಿ ಹಿಂದೆ ಬರುತ್ತಾರೆ.
ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ಗಳು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆಗಳು ಇವುಗಳನ್ನು ಬೇರೆ ಬ್ಯಾಂಕ್ನೊಂದಿಗೆ ವಿಲೀನ ಮಾಡುವ ಮೂಲಕ ಈ ಅಸ್ಮಿತೆಗಳನ್ನು ನಾಶಮಾಡಲಾಯಿತು. ದೇಶ ಆರ್ಥಿಕ ಹಿಂಜರಿತಕ್ಕೆ ಒಳಗಾದಾಗ ಜನರ ಗಮನ ಬೇರೆಡೆ ತಿರುಗಿಸಲು ೩೭೦ ವಿಧಿ ರದ್ದು ಎಂಬ ನಾಟಕ ಪ್ರಾರಂಭವಾಯಿತು. ಆರ್ಥಿಕ ಹಿಂಜರಿತದ ಬಗ್ಗೆ ಜನರೊಂದಿಗೆ ಮಾತನಾಡುತ್ತಾರೆ ಎಂಬ ಭಯದಿಂದ ಆರ್ಥಿಕ ತಜ್ಞ ಪಿ. ಚಿದಂಬರಂರವರನ್ನು ಬಂಧಿಸಲಾಯಿತು. ಕರ್ನಾಟಕದ ಉಪಚುನಾವಣೆಯಲ್ಲಿ ಕಾಂಗ್ರೆಸನ್ನು ಹಿಮ್ಮೆಟ್ಟಿಸಲು ಡಿ.ಕೆ. ಶಿವಕುಮಾರ್ರವರನ್ನು ಸೆರೆಮನೆಗೆ ದೂಡಲಾಯಿತು. ಮೋದಿ-ಶಾ ರಾಜಕೀಯ ದೌರ್ಜನ್ಯ ಎಂದೂ ಯಶಸ್ವಿಯಾಗದು ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದು ನೆಹರೂ ಪ್ರಣೀತ ಪ್ರಜಾಪ್ರಭುತ್ವ ಹೊಂದಿದ ದೇಶ ಎಂದರು.
ಈ ದೇಶ ಬಹು ಸಂಸ್ಕೃತಿಗಳ ನಾಡು. ಏಕ ಭಾಷೆಯನ್ನು ಹೇರುವ ಮೂಲಕ ಬಿಜೆಪಿ ದೇಶದ ಬಹುತ್ವವನ್ನು ನಾಶ ಮಾಡಲು ಹೊರಟಿದೆ. ಇದನ್ನು ಪ್ರಜ್ಞಾವಂತ ನಾಗರೀಕರು ವಿರೋಧಿಸಬೇಕಾಗಿದೆ. ದೇಶದ ಬಹುತ್ವ ನಾಶವಾದರೆ ದೇಶ ಏಕ ಸಂಸ್ಕೃತಿಯತ್ತ ಸಾಗಿ ಅದು ಸರ್ವಾಧಿಕಾರಕ್ಕೆ ಎಡೆ ಮಾಡುತ್ತದೆ. ಇದು ದೇಶಕ್ಕೆ ಅಪಾಯಕಾರಿ. ಈಗ ಕಾಂಗ್ರೆಸ್, ಬಿಜೆಪಿ, ಕಮ್ಯೂನಿಷ್ಟ್ಗೆ ಕಷ್ಟ ಕಾಲವಲ್ಲ ಇಡೀ ದೇಶ ಕಷ್ಟದ ಕಾಲದಲ್ಲಿದೆ. ಈ ನೆಲ ಗಾಂಧಿ ಬಿತ್ತಿದ ಪ್ರೀತಿ, ಮಮತೆಯ ನೆಲ, ನೆಹರೂ ಪ್ರತಿಪಾದಿಸಿದ ಬಹುತ್ವದ ನೆಲ. ಮೋದಿ ಶಾ ಜೋಡಿ ಈ ನೆಲದ ಸೌಹಾರ್ದತೆಯನ್ನು ಹಾಳುಗೆಡವಲು ಈ ದೇಶದ ಜನತೆ ಖಂಡಿತಾ ಬಿಡುವುದಿಲ್ಲ. ಅಪ ಪ್ರಚಾರದ ಸಾಮೂಹಿಕ ಸನ್ನಿಯಿಂದಾಗಿ ಪಕ್ಷಕ್ಕೆ ಸದ್ಯ ಹಿನ್ನಡೆಯಾಗಿರಬಹುದು ಇದು ಎಂದೂ ಶಾಶ್ವತವಲ್ಲ ಎಂದು ಹೇಳಿದರು.
ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿಯವರು ಮಾತನಾಡಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಘನ ಪ್ರಧಾನಿಗಳು ಅಮೇರಿಕಾದಲ್ಲಿ ನಾನು ಭಾರತದಲ್ಲಿ ಶೌಚಾಲಯವನ್ನು ಕಟ್ಟಿಸಿಕೊಟ್ಟೆ ಎಂದು ಬಾಲಿಶವಾಗಿ ಭಾಷಣ ಮಾಡುತ್ತಾರೆ. ಇದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ನಮ್ಮೊಳಗೆ ದೇಶದಲ್ಲಿ ಏನೇ ಬಿನ್ನಾಭಿಪ್ರಾಯವಿರಬಹುದು ಆದರೆ ದೇಶದ ಹೊರಗೆ ದೇಶದ ಹಿತ ಸಾಧನೆಯೇ ಮುಖ್ಯವಾಗಬೇಕು. ಅಲ್ಲಿ ದೇಶವನ್ನು ಅಗೌರವಿಸಿದರೆ ಅದು ವಿಕೃತಿ. ನನ್ನಿಂದಲೇ ಎಲ್ಲಾ ಅನ್ನುವುದು ಸರ್ವಾಧಿಕಾರದ ಸಂಕೇತ. ವ್ಯಕ್ತಿ ಪೂಜೆ ಸರ್ವಾಧಿಕಾರಕ್ಕೆ ದಾರಿಯಾಗುತ್ತದೆ ಎಂದರು.
ಈ ಪ್ರತಿಭಟನೆಯ ನೇತೃತ್ವ ವಹಿಸಿದ ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ ಪ್ರವಾಹ ಬಂದು ಮನೆ ಮಠ ಕಳಕೊಂಡ ಸಂತ್ರಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ತನಕ ಯಾವುದೇ ಪರಿಹಾರ ಕ್ರಮ ಜರಗಿಲ್ಲ. ಕೇಂದ್ರದಿಂದ ಚಿಕ್ಕಾಸು ಬಿಡುಗಡೆ ಆಗಿಲ್ಲ. ಈ ಮೊದಲು ಪ್ರವಾಹ ಬಂದಾಗ ಖುದ್ದು ಪ್ರಧಾನಿ ಮನಮೋಹನ್ ಸಿಂಗರೇ ವೈಮಾನಿಕ ಸಮೀಕ್ಷೆ ಮಾಡಿ ದೆಹಲಿಗೆ ಹೋಗುವ ಮುನ್ನವೇ 1600 ಕೋಟಿ ಪರಿಹಾರ ಧನ ಬಿಡುಗಡೆ ಮಾಡಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೆನಪಿಲ್ಲವೇ? ಪ್ರಧಾನಿಗಳಲ್ಲಿ ಪರಿಹಾರ ಧನ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಲು ಭಯವೇ? ಹಾಗಾದರೆ ರಾಜೀನಾಮೆ ಕೊಟ್ಟು ಈ ರಾಜ್ಯ ಜನತೆಯನ್ನು ರಕ್ಷಿಸಿ. ಅವೈಜ್ಞಾನಿಕವಾಗಿ ಮೋಟಾರು ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸಿ ಬಡ ವಾಹನ ಚಾಲಕರು ಪರದಾಡುವಂತೆ ಮಾಡಿದ ಕೇಂದ್ರ ಸರಕಾರದ ಕ್ರಮ ಇದು ಪ್ರಜಾಪ್ರಭುತ್ವ ವಿರೋಧಿ ದೋರಣೆ. ಇದು ಹಿಟ್ಲರ್ ಆಡಳಿತ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿದೆ. ಜನಪರವಾದ ರಾಜ್ಯ ಮೈತ್ರಿ ಸರಕಾರವನ್ನು ಅನೈತಿಕ ಮಾರ್ಗದಲ್ಲಿ ಬೀಳಿಸಿ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರಿಗೆ ರಾಜ್ಯದ ಜನತೆಯ ಹಿತಕ್ಕಾಗಿ ಮೋದಿ-ಶಾರ ಎದುರು ನಿಲ್ಲುವಂತಹ ತಾಕತ್ತು ಇಲ್ಲ. ಇದನ್ನು ಜನ ಗಮನಿಸುತ್ತಿದ್ದಾರೆ. ನಮ್ಮ ಈ ಹೋರಾಟ ಈ ದೇಶದ ಬಡ ಕಾರ್ಮಿಕರ ಮತ್ತು ತಳ ಸಮುದಾಯದ ಹಿತ ರಕ್ಷಣೆಗಾಗಿ. ಇದು ಸಫಲವಾಗುವ ತನಕ ನಾವು ವಿಶ್ರಮಿಸುವುದಿಲ್ಲ ಎಂದರು.
ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಶಾಸಕರಾದ ಶ್ರೀ ಯು.ಆರ್. ಸಭಾಪತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ, ಕಾಪು ಉತ್ತರ ವಲಯ ಮಹಿಳಾ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಚಂದ್ರಿಕಾ ಕೇಳ್ಕರ್, ಮೈರ್ಮಾಡಿ ಸುಧಾಕರ ಶೆಟ್ಟಿ, ಹಿರಿಯರಾದ ಶ್ರೀ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಕೊನೆಯಲ್ಲಿ ಕಾಪು ಬ್ಲಾಕ್ (ದಕ್ಷಿಣ) ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ನವೀನ್ಚಂದ್ರ ಸುವರ್ಣ ವಂದಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
ಸಭೆಗಿಂತ ಮೊದಲು ಕಾರ್ಯಾಲಯದಿಂದ ಸಭೆಯ ಸ್ಥಳದ ತನಕ ಪ್ರತಿಭಟನಾ ಮೆರವಣಿಗೆ ಜರಗಿತು.