ಕುಂದಾಪುರ, ಸೆ 24 (Daijiworld News/RD): ತನ್ನ ಮನೆಯಿಂದ ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾದ ಮಹಿಳೆಯೋರ್ವರ ಮೃತದೇಹ ಮನೆಯದ್ದೇ ಬಾವಿಯಲ್ಲಿ ಪತ್ತೆಯಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ನಡೆದಿದೆ.
ಮರದ ಕೆತ್ತನೆ ಕೆಲಸ ನಿರ್ವಹಿಸುತ್ತಿರುವ ಕಟ್ಬೇಲ್ತೂರು ನಿವಾಸಿ ಮಂಜುನಾಥ ಆಚಾರ್ಯ ಅವರ ಪತ್ನಿ ಸುನಿತಾ ಆಚಾರ್ಯ(39) ಸಾವನ್ನಪ್ಪಿದ ಮಹಿಳೆಯಾಗಿದ್ದು ಮಹಿಳೆ ಸಾವಿನ ಹಿಂದೆ ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗುತ್ತಿದೆ.
ಸೆ. 20 ರಂದುಶುಕ್ರವಾರ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದ ರಸ್ತೆ ಸಮೀಪವಿರುವ ಮನೆಯಿಂದ ಸುನಿತಾ ಆಚಾರ್ಯ ನಿಗೂಢವಾಗಿ ನಾಪತ್ತೆಯಾಗಿದ್ದರು. ಅಂದು ತಡರಾತ್ರಿ 11.30ರ ಸುಮಾರಿಗೆ ಸುನಿತಾ ಪುತ್ರಿ ತಾಯಿ ಇಲ್ಲದ ಬಗ್ಗೆ ಗಮನಿಸಿ ಮನೆಯವರಿಗೆ ತಿಳಿಸಿದ್ದು ಶುಕ್ರವಾರ ರಾತ್ರಿಯಿಂದಲೂ ಸುನಿತಾ ಪತ್ತೆಗಾಗಿ ಕುಟುಂಬಿಕರು ಮತ್ತು ಸ್ಥಳೀಯರು ಹುಡುಕಾಡಿದ್ದರು. ಸತತ ಹುಡುಕಾಡಿದ ಬಳಿಕ ಮಾರನೇ ದಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುನಿತಾ ಪುತ್ರ ನಾಪತ್ತೆ ಪ್ರಕರಣ ದಾಖಲಿಸಿದ್ದಲ್ಲದೇ ಸುನಿತಾ ಮನೆ ಬಾವಿ ಸೇರಿದಂತೆ ಸಮೀಪದ ನದಿ, ರೈಲ್ವೆ ಹಳಿ, ಕೆರೆ-ಬಾವಿಗಳಲ್ಲೂ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು. ಆದರೂ ಸುನಿತಾ ಸುಳಿವು ಲಭ್ಯವಾಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಸುನಿತಾ ಶವ ಅವರ ಮನೆ ಬಾವಿಯಲ್ಲೇ ಪತ್ತೆಯಾಗಿದೆ.
ಅನುಮಾನ ಯಾಕೆ?
ಆತ್ಮಹತ್ಯೆ ಎನ್ನಲಾಗುತ್ತಿರುವ ಸುನಿತಾ ಸಾವಿನ ಹಿಂದೆ ಅನುಮಾನಗಳು ಹಿಟ್ಟಿಕೊಂಡಿದ್ದು ಸಾರ್ವಜನಿಕರ ಹೇಳಿಕೆಗೂ ಸುನಿತಾ ಕುಟುಂಬಿಕರ ಹೇಳಿಕೆಗಳು ಈ ಗೊಂದಲ ಸ್ರಷ್ಟಿಸಿದೆ. ಸುನಿತಾ ನಾಪತ್ತೆಯಾದ ಮರುದಿನ ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೇರಳ ಮೂಲದ ಮುಳುಗುತಜ್ಞ ಬೇಬಿ ಅವರನ್ನು ಕರೆಸಿ ಸಮೀಪದಲ್ಲಿರುವ 20ಕ್ಕೂ ಅಧಿಕ ಮನೆಗಳಲ್ಲಿನ ಬಾವಿಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಸೋಮವಾರ
ಮೃತದೇಹ ಸಿಕ್ಕ ಸುನಿತಾ ಮನೆ ಬಾವಿಯಲ್ಲೂ ಒಂದೆರಡು ಬಾರಿ ಮುಳುಗಿ ತಳದಲ್ಲಿರುವ ಮಣ್ಣನ್ನು ಕೂಡ ಮೇಲಕ್ಕೆ ತಂದಿದ್ದರು. ಬಾವಿ ಸುತ್ತ ಹುಕಾಟ ನಡೆಸಿದರೂ ಸುನಿತಾ ಪತ್ತೆಯಾಗಿರಲಿಲ್ಲ. ಬಾವಿಯಲ್ಲಿ ಯಾವುದೇ ಕೊರೆತ ಅಥವಾ ದೇಹ ಸಿಕ್ಕಿಬೀಳುವಂತಹ ಪೊದೆಯೂ ಇರಲಿಲ್ಲ. ಆದರೇ ಮೂರು ದಿನಗಳ ಮೇಲೆಗ ಮೃತದೇಹ ಹೇಗೆ ಮೇಲಕ್ಕೆ ಬಂತು ಎಂಬುದು ಮುಳುಗುತಜ್ಞ ಸಹಿತ ಸ್ಥಳೀಯರು ಅಚ್ಚರಿಗೆ ಕಾರಣವಾಗಿದೆ.
ಸಾಮಾನ್ಯವಾಗಿ ಯಾವುದೇ ವ್ಯಕ್ತಿ ನೀರಲ್ಲಿ ಮುಳುಗಿದಾಗ ಒಂದು ದಿನದ ಬಳಿಕ ಮೃತದೇಹ ಮೇಲಕ್ಕೆ ಬರುತ್ತದೆ. ಕೆರೆ ಮತ್ತು ಬಾವಿಗಳಲ್ಲಿ ಒಂದೇ ದಿನದಲ್ಲಿ ಮೃತದೇಹ ಮೇಲಕ್ಕೆ ಬಂದಿರುತ್ತದೆ. ಹರಿಯುವ ನದಿ ಹಾಗೂ ಸಮುದ್ರಕ್ಕೆ ಬಿದ್ದ ವ್ಯಕ್ತಿಯ ಮೃತದೇಹ ಕೊಚ್ಚಿಹೋಗುವ ಸಾಧ್ಯತೆ ಇರುವಾಗ ಒಂದೆರಡು ದಿನವಾಗುವ ಸಾಧ್ಯತೆಗಳು ಇರುತ್ತದೆ. ತನ್ನ ಮನೆಯ ಸಮೀಪದ ಸಾಮಾನ್ಯ ಬಾವಿಗೆ ಬಿದ್ದು ಮೂರು ದಿನಗಳಾದರೂ ಕೂಡ ಶವ ಮೇಲಕ್ಕೆ ಬಾರದಿರುವುದು, ಕೊಳೆತ ವಾಸನೆ ಬಾರದೇ ಇರುವುದು ಮೃತದೇಹ ಸಿಕ್ಕಲು ವಿಳಂಬವಾಗಿದೆ. ಸುನಿತಾ ಮೃತದೇಹ ಮೇಲಕ್ಕೆತ್ತಿ ತಂದಾಗ ಪತಿ, ಪುತ್ರ, ಪುತ್ರಿ ಸಹಿತ ಕುಟುಂಬಿಕರ ರೋಧನ ಮುಗಿಲು ಮುಟ್ಟಿತ್ತು.
ಇತ್ತೀಚೆಗೆ ಸುನಿತಾ ಅವರಿಗೆ ವಿಪರೀತ ಬೆನ್ನುನೋವು ಹಾಗೂ ಚರ್ಮ ರೋಗಕ್ಕೆ ಸಂಬಂಧಿಸಿದಂತೆ ಬಳಲುತ್ತಿದ್ದು ಇದಕ್ಕಾಗಿ ಮಾತ್ರೆಗಳನ್ನು ತಿನ್ನುತ್ತಿದ್ದರು, ಹೀಗಾಗಿ ಖಿನ್ನತೆಗೊಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಿಕರು ದೂರು ನೀಡಿದ್ದಾರೆ. ಅದರಂತೆಯೇ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.