ಸುಬ್ರಹ್ಮಣ್ಯ, ಸೆ 23(DaijiworldNews/SM): ಪಶ್ಚಿಮಘಟ್ಟ ಪ್ರದೇಶದಲ್ಲಿ ಇಂದು ಸಂಜೆ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಶ್ರೀ ಕುಕ್ಕೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಅವರಣಕ್ಕೆ ನೀರು ನುಗ್ಗಿದೆ.
ಕುಮಾರ ಪರ್ವತದಿಂದ ಹರಿದು ಬರುತ್ತಿರುವ ಈ ನದಿಯಲ್ಲಿ ನೀರಿನ ಹರಿವು ಸಂಜೆ ವೇಳೆ ಏಕಾಏಕಿ ಹೆಚ್ಚಾದ ಕಾರಣ, ಆದಿ ಸುಬ್ರಹ್ಮಣ್ಯ ದೇವಸ್ಥಾನ ಸುತ್ತಮುತ್ತ ನೀರು ಆವರಿಸಿ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ನದಿ ನೀರು ದೇವಸ್ಥಾನವನ್ನೂ ಪ್ರವೇಶಿಸಿದ್ದು, ಸುಬ್ರಹ್ಮಣ್ಯ ಪರಿಸರ ಕೆಲಕಾಲ ಮುಳುಗಡೆಯ ಭೀತಿ ಎದುರಾಗಿತ್ತು.
ಆದಿ ಸುಬ್ರಹ್ಮಣ್ಯ ರಥಬೀದಿಯ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರಹ್ಮಣ್ಯದಿಂದ ಆದಿ ಸುಬ್ರಹ್ಮಣ್ಯ ಸಂಪರ್ಕಿಸುವ ಕಿರು ಸೇತುವೆ ಮುಳುಗಡೆ ಭೀತಿ ಎದುರಿಸಿತು.
ಭಾರೀ ಮಳೆಯಿಂದಾಗಿ ನದಿ ತೀರದ ಕೃಷಿ ಭೂಮಿಗಳು ಕೂಡ ಮುಳುಗಡೆಯಾಗಿದೆ. ಅಲ್ಲದೆ ದರ್ಪಣ ತೀರ್ಥ ನದಿ ಪಾತ್ರದಲ್ಲಿರುವ ಮನೆಗಳು ಹಾಗೂ ಕೆಲವು ವಸತಿ ಗೃಹಗಳಿಗೆ ನೀರು ನುಗ್ಗಿ ಜಲಾವೃತಗೊಂಡಿತು.