ಮಂಗಳೂರು, ಸೆ 22 (DaijiworldNews/SM): ರಸ್ತೆ ಪಕ್ಕದಲ್ಲಿ ಅಪಘಾತದಲ್ಲಿ ಗಾಯಗೊಂಡವರಿದ್ದರೆ, ಅಥವಾ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರೆ, ಅವರನ್ನು ಕಂಡೂ ಕಾಣದಂತೆ ತೆರಳುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ, ಹೀಗೆ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಮಹಿಳೆಯೋರ್ವರಿಗೆ ಶಾಸಕ ಭರತ್ ಶೆಟ್ಟಿಯವರ ಮನ ಮಿಡಿದಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ರಸ್ತೆಯಲ್ಲಿ ಮಹಿಳೆಯೋರ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅದನ್ನು ಕಂಡ ಶಾಸಕರು ಕೂಡಲೇ ತಮ್ಮ ಕಾರಿನಿಂದ ಇಳಿದಿದ್ದಾರೆ. ಹಾಗೂ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ವಿವಿಧ ಕಾರ್ಯಕ್ರಮದ ನಿಮಿತ್ತ ತೆರಳುವ ಸಂದರ್ಭ ಶಾಸಕರು ತಮ್ಮ ಕಾರಿನಲ್ಲೂ ಬ್ಯುಸಿಯಾಗಿರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಗಮನಿಸುವ ಗೋಜೀಗೂ ತೆರಳುವುದಿಲ್ಲ. ಆದರೆ, ಶಾಸಕ ಭರತ್ ಶೆಟ್ಟಿ ಮಹಿಳೆಯನ್ನು ಗಮನಿಸಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.