ಕಾರ್ಕಳ, ಸೆ 22 (DaijiworldNews/SM): ಕಲೆ, ಸಾಹಿತ್ಯ ಇಚ್ಛೆ ಪಡದವರು ಯಾರು ಇಲ್ಲ. ಸಾಹಿತ್ಯ ಸಂಘವೊಂದು ಸುಧೀರ್ಘ ಕಾಲ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವುದು ಸಾಹಿತ್ಯ ಲೋಕಕ್ಕೆ ಹೆಮ್ಮೆಯ ವಿಚಾರವಾಗಿದೆ. ಮಂಗಳೂರು ವಿವಿಯಲ್ಲಿ ಹೊಸ ಬದಲಾವಣೆ ತರುವ ಹಂಬಲ ಹೊಂದಿದ್ದೇನೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಎಡಪಡಿತ್ತಾಯ ಹೇಳಿದರು.
ಕಾರ್ಕಳ ಕನ್ನಡ ಸಾಹಿತ್ಯ ಸಂಘದ 22ನೇ ವಾರ್ಷಿಕ ಸಮಾರೋಹದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಸ್ಯ ಲೇಖಕ ಹಾಗೂ ವಾಗ್ಮಿ ಎಂ.ಎಸ್. ನರಸಿಂಹ ಮೂರ್ತಿ ಮಾತನಾಡಿ, ಬದುಕಿನಲ್ಲಿ ಹಾಸ್ಯ ರೂಢಿಸಿಕೋಳ್ಳಬೇಕು. ಇದರಿಂದ ಯಾವುದೇ ರೋಗ ಬರುವುದಿಲ್ಲ. ಹೃದಯ ಸಂಬಂಧ ಕಾಯಿಲೆ ನಿವಾರಣೆಯಲ್ಲಿ ಹಾಸ್ಯವು ಮದ್ದು. ನಗುವಿನಲ್ಲಿ ಎರಡು ವಿಧಗಳಿವೆ. ಮೆಚ್ಚು ನಗು. ಚುಚ್ಚು ನಗೆ. ಸಣ್ಣ ಮಗು ತುಂಬು ನಗು ಬೀರುವಂತೆ ನಗೆಯನ್ನು ಪಡೆಯಲು ಪ್ರಾಮಾಣಿಕ ಹೃದಯವಂತರಾಗಬೇಕು. ಕನ್ನಡದ ಹಿರಿಯ ಹಾಸ್ಯ ಸಾಹಿತಿಗಳಾದ ಟಿ.ಪಿ.ಕೈಲಾಸ, ಭೀಚಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜೀವನ ಅನುಭವಗಳ ಕೃತಿಗಳನ್ನು ಸ್ಮರಿಸಿಕೊಂಡರು.