ಮಂಗಳೂರು, ಸೆ.21(Daijiworld News/SS): ಯುವ ಕವಯತ್ರಿ ನಜ್ಮಾ ನಝೀರ್ ಚಿಕ್ಕನೇರಳೆ ರಚಿತ ‘ಪಿವೋಟ್ ಪದ್ಯಗಳು’ ಪುಸ್ತಕವನ್ನು ವಿವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪಟ್ಟಾಭಿರಾಮ ಸೋಮಯಾಜಿ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಪಟ್ಟಾಭಿರಾಮ ಸೋಮಯಾಜಿ, ‘ಪಿವೋಟ್ ಪದ್ಯಗಳು’ ಸಮಾಜವನ್ನು ಎಚ್ಚರಿಸುವ ಪ್ರತಿರೂಪದಂತಿವೆ. ಪ್ರಸ್ತುತ ಸಮಾಜದ ತ್ರಿಶಂಕು ಸ್ಥಿತಿಯಲ್ಲಿ ಮನಸುಗಳನ್ನು ಬಡಿದೆಬ್ಬಿಸುವ ಕಾರ್ಯ ಹಿಂದೆಂದಿಗಿಂತಲೂ ಈಗ ಅಗತ್ಯವಿದೆ. ಉದಯೋನ್ಮುಖ ಲೇಖಕಿ ನಜ್ಮಾ ತಮ್ಮ ಪುಸ್ತಕದುದ್ದಕ್ಕೂ ಅದನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.
ಇಂದಿನ ಯುವ ಜನಾಂಗದಲ್ಲಿ ಕಾವ್ಯ, ಸಾಹಿತ್ಯದ ಗಂಧಗಾಳಿಯೇ ಇಲ್ಲ. ಮಾತುಮಾತಿಗೆ ದ್ವೇಷಗಳು ಹಿಂಬಾಲಿಸುತ್ತಿವೆ. ಆದರೆ ಲೇಖಕಿ ನಜ್ಮಾ ಪ್ರೀತಿ-ಪ್ರೇಮ, ಪ್ರೀತಿಯ ವಂಚನೆ, ಪ್ರೀತಿಯ ಹಂಬಲವನ್ನು ಕವನಗಳ ಮೂಲಕವೇ ತೋರಿಸಿದ್ದು, ಸುತ್ತಮುತ್ತಲಿನ ತಾರತಮ್ಯಗಳನ್ನು ಅಕ್ಷರಗಳಿಂದಲೇ ಪ್ರತಿಭಟಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕಿ ನಜ್ಮಾ ನಝೀರ್ ಚಿಕ್ಕನೇರಳೆ, ‘ರಾಜ್ ನ್ಯೂಸ್’ನ ಕಾರ್ಯಕ್ರಮ ನಿರ್ಮಾಪಕ ರಾ.ಚಿಂತನ್ ಉಪಸ್ಥಿತರಿದ್ದರು. ಪತ್ರಕರ್ತ ಶಂಶೀರ್ ಬುಡೋಳಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.