ಮಂಗಳೂರು, ಸೆ.21(Daijiworld News/SS): ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ನ್ನು ಮುಗಿಸಲು ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಅವರ ಕೊನೆ ಆಸೆ ಏನೆಂಬುದು ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಮೆರಿಕಾದಂತಹ ದೇಶ ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರದ ಪ್ರಧಾನಿಯ ಜತೆಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ಸನ್ನಿವೇಶ ಸೃಷ್ಟಿಯಾಗಿರುವುದು ಒಂದು ಜಾಗತಿಕ ಐತಿಹಾಸಿಕ ದಿನ. ಅಮೆರಿಕಾದಲ್ಲಿ ಭಾರತೀಯರನ್ನು ಉದ್ದೇಶಿಸಿ ಅಲ್ಲಿನ ಅಧ್ಯಕ್ಷರು ಮಾತನಾಡಬೇಕೆಂದರೆ ಇದರ ಹಿಂದೆ ಬಲವಾದ ನಂಬಿಕೆ, ವಿಶ್ವಾಸ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಕಳೆದ 4-5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಕ್ತಿಯನ್ನು ವಿಶ್ವಕ್ಕೆ ತಿಳಿಸಿರುವುದು ಇದಕ್ಕೆ ಕಾರಣ. ಟ್ರಂಪ್ ಅವರು ವಿದೇಶಿ ನೀತಿಗಳಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರೂ ಭಾರತೀಯರ ಬಗ್ಗೆ ಮತ್ತು ಭಾರತದ ಶಕ್ತಿಯ ಬಗ್ಗೆ ಅವರಿಗೆ ವಿಶೇಷ ಒಲವು ಇರುವುದು ಇದರಿಂದ ಗೊತ್ತಾಗುತ್ತಿದೆ ಎಂದು ಹೇಳಿದರು.
ಜನರಿಕ್ ಔಷಧ ಬಳಕೆ ಹೆಚ್ಚಳವಾಗುತ್ತಿದೆ. ಕೆಲವೆಡೆ ಐದುಪಟ್ಟು ಜನರಿಕ್ ಔಷಧ ಹೆಚ್ಚಳವಾಗಿದೆ. ರಾಜ್ಯದಲ್ಲಿ ಪ್ರತ್ಯೇಕ ವೇರ್ಹೌಸ್ ಮಾಡಿ ಅಲ್ಲಿಂದ ಜನರಿಕ್ ಔಷಧಗಳನ್ನು ನೇರವಾಗಿ ಆನ್ಲೈನ್ನಲ್ಲಿ ತರಿಸುವ ವ್ಯವಸ್ಥೆ ಮಾಡಿದ್ದೇವೆ. ಆಯುರ್ವೇದ ಔಷಧವನ್ನೂ ಜನರಿಕ್ ವ್ಯಾಪ್ತಿಯಲ್ಲಿ ತರುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ದೇಶದ ದೊಡ್ಡ ದೊಡ್ಡ ರಸಗೊಬ್ಬರ ಕಾರ್ಖಾನೆ ಬಂದ್ ಆಗಿತ್ತು. ಆದರೆ ಮೋದಿ ಸರಕಾರ ಬಂದ ಬಳಿಕ ಬಂದ್ ಆದ ಕಾರ್ಖಾನೆಗಳನ್ನು ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ಮತ್ತೆ ತೆರೆಯುವ ಬಗ್ಗೆ ಚಿಂತನೆ ನಡೆಸಿದ್ದೇವ. ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲ. ನಮ್ಮ ದೇಶದಲ್ಲಿ ಶೇ.80 ರಷ್ಟು ರಸಗೊಬ್ಬರ ಉತ್ಪಾದನೆ ಆಗುತ್ತಿದೆ. ಶೇ.20 ರಷ್ಟು ವಿದೇಶದಿಂದ ಆಮದು ಮಾಡುತ್ತಿದ್ದೇವೆ ಎಂದು ತಿಳಿಸಿದರು.