ಕಾಸರಗೋಡು, ಸೆ 21 (Daijiworld News/RD): ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನಡೆಸಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಜಯ ಲಭಿಸಿದ್ದು, ಸೆ. 26 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತುಕತೆಗೆ ಆಹ್ವಾನಿಸರುವುದಾಗಿ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ತಲಪಾಡಿ - ಕಾಸರಗೋಡು ನಡುವಿನ ರಾಷ್ಟ್ರೀಯ ಹೆದ್ದಾರಿಯ ಹಾಗೂ ಜಿಲ್ಲೆಯ ಬಹುತೇಕ ರಸ್ತೆಗಳ ದುರವಸ್ಥೆಯನ್ನು ಪ್ರತಿಭಟಿಸಿ ಸಂಸದರು ಶುಕ್ರವಾರ ಬೆಳಿಗ್ಗೆ 9 ರಿಂದ ಶನಿವಾರ ಬೆಳಿಗ್ಗೆ 9 ರ ತನಕ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಸಮಾರೋಪವನ್ನು ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಉದ್ಘಾಟಿಸಿದರು. 24 ಗಂಟೆಗಳ ಸತ್ಯಾಗ್ರಹಕ್ಕೆ ವಿವಿಧ ವಲಯಗಳಿಂದ ಬೆಂಬಲ ಲಭಿಸಿತ್ತು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವ ಮುನ್ನೆಚ್ಚರಿಕೆ ನೀಡಲಾಗಿತ್ತು. ಈ ನಡುವೆ ಸಮಸ್ಯೆ ಇತ್ಯರ್ಥಗೊಳಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು 26 ರಂದು ಮಾತುಕತೆಗೆ ಆಹ್ವಾನಿಸಿದ್ದಾರೆ. ಇನ್ನು ಸಭೆಯಲ್ಲಿ ಇತ್ಯರ್ಥವಾಗದಿದ್ದಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಸದರು ತಿಳಿಸಿದ್ದಾರೆ.