ಬಂಟ್ವಾಳ,ಸೆ 21 (Daijiworld News/RD): ಬಿಜೆಪಿ ಸರಕಾರ ಸಾಲ ಮೇಳವನ್ನು ಆಯೋಜಿಸುವ ನಿರ್ಧಾರವನ್ನು ಕೈಗೊಂಡಿರುವುದಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕ, ಬಿ ಜನಾರ್ದನ ಪೂಜಾರಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಡೆಯನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ ಇಂದಿರಾಗಾಂಧಿ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಕಾಲದಲ್ಲಿ ಜನಾರ್ದನ ಪುಜಾರಿ 1980 ರಲ್ಲಿ ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಸಾಲಮೇಳ ಆಯೋಜಿಸುವ ಮೂಲಕ ಬಹಳಷ್ಟು ಪ್ರಖ್ಯಾತರಾಗಿದ್ದರು. ಇಂದಿರಾ ಗಾಂಧಿಯವರಂತೆಯೇ ನಿರ್ಮಲಾ ಸೀತಾರಾಮನ್ ಕೂಡಾ ಇಂತಹ ದಿಟ್ಟ ನಡೆಯನ್ನು ತೆಗೆದುಕೊಂಡಿದ್ದಾರೆ ಎಂದು ಪೂಜಾರಿ ಹೇಳಿದ್ದಾರೆ.
‘ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ನಿರ್ಮಲಾ ಸೀತಾರಾಮನ್ ಅವರನ್ನು ನಾನು ಅಭಿನಂದಿಸುತ್ತೇನೆ. ಹಣಕಾಸು ಸಚಿವರಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಾಲ ಮೇಳ ಆಯೋಜಿಸುತ್ತಿರುವುದಕ್ಕೆ ಅಭಿನಂದಿಸುತ್ತೇನೆ. ದೇವರು ಪ್ರಧಾನಿ, ಹಣಕಾಸು ಸಚಿವರು ಮತ್ತು ಇಡೀ ಸಂಪುಟ ಸದಸ್ಯರನ್ನು ಒಳ್ಳೆಯದು ಮಾಡಲಿ’ ಎಂದು ಪುಜಾರಿ ಹರಸಿದ್ದಾರೆ.
ದಶಕಗಳ ಹಿಂದೆ ಆಯೋಜಿಸಿದ್ದ ಸಾಲ ಮೇಳವನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಪೂಜಾರಿ, ನಿರ್ಮಲಾ ಅವರು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಸಾಲ ಮೇಳ ಆಯೋಜಿಸಿದ ಸಂದರ್ಭದಲ್ಲಿ ನಾನು ಮತ್ತು ಇಂದಿರಾ ಗಾಂಧಿ ಅವರು ಟೀಕೆಗಳನ್ನು ಎದುರಿಸಿದ್ದೆವು. ಇದು ಬಡವರ ಕಣ್ಣೀರು ಒರೆಸುವ ಒಂದು ಉತ್ತಮ ಯೋಜನೆ. ನಾನು ಮನಸ್ಸು ಪೂರ್ತಿಯಾಗಿ ಈ ಯೋಜನೆಯನ್ನು ಬೆಂಬಲಿಸುತ್ತೇನೆ. ಯಾವುದೇ ಟೀಕೆಗಳಿಗೂ ಕಿವಿಗೊಡದೇ ಈ ಕೆಲಸವನ್ನು ಸೀತಾರಾಮನ್ ಮುಂದುವರಿಸಬೇಕು. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಧ್ಯವಾಗಲಿಕ್ಕಿಲ್ಲ’ ಎಂದೂ ಬಿ ಜನಾರ್ದನ ಪೂಜಾರಿ ಹೇಳಿದ್ದಾರೆ.