ಕಾಪು, ಸೆ 20(DaijiworldNews/SM): ಶಂಕರಪುರ ಸಮೀಪದ ಶಿವಾನಂದ ನಗರದ ನಿವಾಸಿಗಳಾದ ಶಿಕ್ಷಕ ದಂಪತಿ ಶಂಕರ್ ಮತ್ತು ಗಿರಿಜಾ ಅವರ ಮನೆಯಿಂದ ಚಿನ್ನಾಭರಣ ಕಳವುಗೈದ ಆರೋಪಿ ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆ ನಿವಾಸಿ ನಿಶಾಂತ್ ಎಸ್. ಕುಮಾರ್(19) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಸುಮಾರು 111.52 ಗ್ರಾಂ. ತೂಕದಷ್ಟು ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಆರೋಪಿಯ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.
ಶಿವಾನಂದ ನಗರದ ಶಂಕರ್ ಎಸ್. ಮತ್ತು ಅವರ ಪತ್ನಿ ಗಿರಿಜಾ ಅವರು ಎರಡು ತಿಂಗಳ ಹಿಂದೆ ಮನೆಯ ಕಪಾಟಿನಲ್ಲಿ ಇಟ್ಟಿದ್ದ ಸುಮಾರು 4.80 ಲಕ್ಷ ರೂ. ಮೌಲ್ಯದ 144 ಗ್ರಾಂ. ತೂಕದ ಚಿನ್ನಾಭರಣಗಳು ಅವರಿಗೆ ಗೊತ್ತಿಲ್ಲದಂತೆ ಕಳವಾಗಿ ಹೋಗಿದ್ದವು. ಈ ಬಗ್ಗೆ ಅವರು ಸೆ. 13ರಂದು ಕಾಪು ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಮನೆಯ ಕಫಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಶಂಕರ್ ಅವರು ನೀಡಿದ ದೂರಿನ ಆಧಾರದಲ್ಲಿ ಕಾಪು ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಹಗಲು ಹೊತ್ತಿಗೆ ಬಂದು ಹೋಗುತ್ತಿದ್ದ ಸಂಬಂಧಿಕ ಯುವಕ ನಿಶಾಂತ್ ಕುಮಾರ್ ಎಂಬಾತನ ಮೇಲೆ ಮನೆಯವರು ಸಂಶಯ ವ್ಯಕ್ತಪಡಿಸಿದ್ದರು.
ಈ ನಿಟ್ಟಿನಲ್ಲಿ ದೂರುದಾರರ ತಾಯಿ ವನಜ ಅವರು ಮನೆಯಲ್ಲಿರುವಾಗ ಮನೆಗೆ ಬಂದು ಹೋಗುತ್ತಿದ್ದ ಯುವಕನನ್ನು ಕೇಂದ್ರೀಕರಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.