ಕುಂದಾಪುರ, ಸೆ 20(Daijiworld News/RD): ಮನೆಯಲ್ಲಿ ಆತ್ಮೀಯತೆಗೆ ಕುಟುಂಬದ ಸದಸ್ಯರಂತೆ, ಭಕ್ತಿಗೆ ದೇವರಂತದ್ದ ಹಸು ಇಹಲೋಕ ತ್ಯಜೀಸಿದಾಗ ಗೋವನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಗುಡಿಯನ್ನು ನಿರ್ಮಿಸಿ, ಸತ್ತ ಗೋವಿಗೆ ದೇವರ ಸ್ಥಾನ ನೀಡಿದ ಅಪರೂಪದ ವಿದ್ಯಮಾನ ಕುಂದಾಪುರ ತಾಲೂಕಿನ ಹೊಸೂರಿನಲ್ಲಿ ನಡೆದಿದೆ.
ಹೊಸೂರು ಶಾಲೆ ಮುಖ್ಯೋಪಾಧ್ಯಾಯಿನಿ ಲಲಿತಾ ಪಟಗಾರ್ ಹಾಗೂ ಐಟಿಐ ಕಾಲೇಜಿನ ಉಪನ್ಯಾಸಕ ಶಿವಾನಂದ ಅವರು ತಮ್ಮ ನೆಚ್ಚಿನ ಹಸು ಲಕ್ಷ್ಮೀಯ ಹೆಸರಲ್ಲಿ ತನ್ನ ಗೋ ಪ್ರೇಮ ಮೆರೆದಿದ್ದಾರೆ. ಈ ದಂಪತಿಗಳ ಪಾಲಿಗೆ ಲಕ್ಷ್ಮೀ ಕೇವಲ ಗೋವಾಗಿ ಇರಲಿಲ್ಲವಂತೆ. ಸಾಕ್ಷಾತ್ ಲಕ್ಷ್ಮೀಯೇ ಆಗಿದ್ದಳಂತೆ. 15 ವರ್ಷಗಳಿಂದ ಪ್ರೀತಿ, ಅಕ್ಕರೆ, ವಾತ್ಸಲ್ಯ, ಭಕ್ತಿಯ ಸಂಕೇತವಾಗಿದ್ದ ಲಕ್ಷ್ಮೀ ಇನ್ನಿಲ್ಲ ಎನ್ನುವುದನ್ನು ಈ ದಂಪತಿಗಳು ಒಪ್ಪುತ್ತಿಲ್ಲ. ಲಕ್ಷ್ಮೀ ಶಾಶ್ವತವಾಗಿ ನಮ್ಮ ಜೊತೆಗಿದ್ದಾಳೆ ಎನ್ನುವ ಭಾವನೆ ಹೊಂದಿರುವ ಗೋವನ್ನು ಸಂಸ್ಕಾರ ಮಾಡಿದ ಸ್ಥಳದಲ್ಲಿಯೇ ಲಕ್ಷ್ಮೀಯ ಹೆಸರನ್ನು ಚಿರಾಯುವನ್ನಾಗಿ ಮಾಡಿದ್ದಾರೆ.
ಲಕ್ಷ್ಮೀಯನ್ನು ಈ ದಂಪತಿ ತರುವಾಗ ಅದಕ್ಕೆ ಆಗ ಮೂರು ವರ್ಷ. ಮನೆಯ ಗೃಹ ಪ್ರವೇಶಕ್ಕಾಗಿ ಈ ಗೋವನ್ನು ತರಲಾಗಿತ್ತು. ಮನೆಯನ್ನು ಈ ಲಕ್ಷ್ಮೀ ಬೆಳಗಿದ್ದಳು ಎನ್ನುವ ಭಾವಾನಾತ್ಮಕ ಸಂಬಂಧ ಇವರಲ್ಲಿತ್ತು. ಲಕ್ಷ್ಮೀಗೂ ಅಷ್ಟೇ ಈ ದಂಪತಿಗಳೆಂದರೆ ಪಂಚಪ್ರಾಣ. ಪ್ರತಿ ಶುಕ್ರವಾರ ಲಕ್ಷ್ಮೀ ಹಟ್ಟಿಯಿಂದ ಮನೆಯ ದ್ವಾರದ ಬಳಿ ಬಂದು ನಿಲ್ಲುತ್ತದೆಯಂತೆ. ಅರಶಿನ ಕುಂಕುಮ ಹಚ್ಚದೆ ಅದು ಅಲ್ಲಿಂದ ಕದಲುತ್ತಿಲ್ಲವಂತೆ. ಕುಂಕುಮ ಹಚ್ಚಿದ ಬಳಿಕ ಮುಂದೆ ತೆರಳಿತ್ತಂತೆ. ಶಾಲೆ ಎದುರು ನಿಂತು ಒಡತಿಯನ್ನು ಲಕ್ಷ್ಮೀ ಕಾಯುತ್ತಿತ್ತಂತೆ. ಮೂಕ ಜೀವಿಯ ಆ ಬಾಂಧವ್ಯ ಈ ದಂಪತಿಗಳನ್ನು ಕಟ್ಟಿ ಹಾಕಿತು.
ಗೋವನ್ನು ಸಂಸ್ಕಾರ ಮಾಡಿದ ಸ್ಥಳದಲ್ಲಿ ಗುಡಿಯೊಂದನ್ನು ನಿರ್ಮಿಸಿದರು. ಎತ್ತರದ ಕಟ್ಟೆ ನಿರ್ಮಿಸಿ ನಡುವೆ ಸುಂದರವಾಗಿ ಗುಡಿ ನಿರ್ಮಿಸಿ ಪಂಚಲೋಹದ ವಿಗ್ರಹವನ್ನು ನಿರ್ಮಾಣ ಮಾಡಿ ಅರ್ಚಕರ ಮೂಲಕ ವೈದಿಕ ನೆಲೆಯಲ್ಲಿ ಹೋಮ ಹವನನಾದಿಗಳನ್ನು ಮಾಡಿ ಪ್ರತಿಷ್ಠಾಪಿಸಿದರು. ನಿತ್ಯವೂ ಪೂಜಿಸುವ ಕ್ರಮ ಇರಿಸಿಕೊಂಡಿದ್ದಾರೆ. ಈ ಗೋವಿನ ದೇವಸ್ಥಾನ ಎಲ್ಲೆಡೆ ಗಮನ ಸಳೆಯುತ್ತಿದೆ.
ಸುಂದರವಾಗಿ ಗುಡಿ ನಿರ್ಮಿಸಿ, ಪಂಚಲೋಹದ ಗೋವಿನ ವಿಗ್ರಹವನ್ನು ಪುರೋಹಿತರ ಮೂಲಕ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಿದ್ದಾರೆ. ನಿತ್ಯ ಪೂಜೆ, ವಿಶೇಷ ದಿನಗಳಲ್ಲಿ ಪೂಜೆಯ ಜೊತೆಯಲ್ಲಿ ಸಮಸ್ತ ಲೋಕಕ್ಕೆ ಒಳ್ಳೆಯದಾಗಬೇಕು ಎನ್ನುವ ವಿಶಾಲ ಮನೋವಾಂಛೆ ಈ ಶಿಕ್ಷಕ ದಂಪತಿಗಳದ್ದು. ಇದಕ್ಕೆ ಆಡಂಬರ, ಪ್ರಚಾರ ಬೇಡ ಎಂದು ಸುಪ್ತವಾಗಿಯೇ ಇರಿಸಿಕೊಂಡ ಈ ಗೋ ದೇವಾಲಯ ಸದ್ದಿಲ್ಲದೇ ಪ್ರಚಾರ ಪಡೆದುಕೊಂಡಿದೆ.