ಕುಂದಾಪುರ, ಸೆ 19 (Daijiworld News/MSP): ಎರಡು ದಿನಗಳ ಹಿಂದೆ ವರ್ಗಾವಣೆಗೊಂಡಿರುವ ಕುಂದಾಪುರ ಉಪವಿಭಾಗಾಧಿಕಾರಿ ಡಾ. ಎಸ್.ಎಸ್.ಮಧುಕೇಶ್ವರ್ ಅವರ ಸರ್ಕಾರಿ ವಸತಿಗೃಹದ ಮೇಲೆ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಗುರುವಾರ ಸಂಜೆ ದಾಳಿ ನಡೆಸಿದೆ.
ಪ್ರತಿಯೊಂದು ಕೆಲಸಕ್ಕೂ ಲಂಚಕ್ಕಾಗಿ ಕೈಚಾಚುತ್ತಿದ್ದ ಎನ್ನುವ ಆರೋಪವಿರುವ ಮಧುಕೇಶ್ವರ್ ಮಂಗಳವಾರವಷ್ಟೇ ಕುಂದಾಪುರ ಉಪವಿಭಾಗದಿಂದ ವರ್ಗಾವಣೆಗೊಂಡಿದ್ದರು. ಆದರೆ ಯಾವ ಸ್ಥಳವೂ ನಿಗಧಿಯಾಗಿರಲಿಲ್ಲ. ಹೊಸದಾಗಿ ಬಂದಿರುವ ಉಪವಿಭಾಗಾಧಿಕಾರಿ ರಾಜೀವ್ ಅವರಿಗೆ ನಿರ್ಗಮನ ಅಧಿಕಾರಿ ಮಧುಕೇಶ್ವರ್ ಮನೆ ಬಿಟ್ಟುಕೊಡಬೇಕಿತ್ತು. ಆದರೆ ಅದೇ ಮನೆಯೊಳಗೆ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ಸಂದರ್ಭ ಆರೋಪಿ ಮಧುಕೇಶ್ವರ್ ಉಪವಿಭಾಗಾಧಿಕಾರಿಗಳಿಗೆ ಸರ್ಕಾರ ನೀಡಿರುವ ವಸತಿಗೃಹದಲ್ಲಿಯೇ ಕಡತ ವಿಲೇವಾರಿ ಮಾಡುತ್ತಿದ್ದು, ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ೨೩ ಕಡತಗಳನ್ನು ಅಕ್ರಮವಾಗಿ ವಿಲೇವಾರಿ ನಡೆಸಲಾಗುತ್ತಿದ್ದು ಕಡತಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಕೆಲಸ ಮಾಡಿಸಿಕೊಡಲು ಲಂಚ ನೀಡಿದವರನ್ನೂ ಕಚೇರಿಯೊಳಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕುಂದಾಪುರ ಉಪ ವಿಭಾಗದಲ್ಲಿ ವಿಭಾಗಾಧಿಕಾರಿಯಾಗಿ ಆಗಮಿಸಿದ ಡಾ ಮಧುಕೇಶ್ವರ್ ಲಂಚಬಾಕನಾಗಿದ್ದಾನೆ ಎಂಬ ಮಾತುಗಳು ಆರಂಭದಿಂದಲೇ ಕೇಳಿ ಬಂದಿದ್ದವು. ಈ ಹಿಂದೆ ತಹಸೀಲ್ದಾರ್ ಆಗಿ ಕುಂದಾಪುರಕ್ಕೆ ಬಂದಿದ್ದ ಮಧುಕೇಶ್ವರ್ ಆ ಸಂದರ್ಭದಲ್ಲಿಯೂ ಲಂಚ ಪಡೆದಿದ್ದ ಎನ್ನುವ ಆರೋಪಗಳೂ ಕೇಳಿ ಬಂದಿವೆ.