ಬಂಟ್ವಾಳ, ಡಿ 29 : ಗ್ರಾಮೀಣ ಬದುಕು, ಸಂಸ್ಕೃತಿ , ಪರಂಪರೆ ಮೇಳೈ ಸುವ ಚಿಣ್ಣರ ಪಾರ್ಕ್ ಅನ್ನು ವಗ್ಗ ಸಮೀಪದ ಆಲಂಪುರಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಡಿ 29 ರ ಗುರುವಾರ ಬಂಟ್ವಾಳ ತಾಲೂಕು ಪಂಚಾಯತ್ ನ 28 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ 2ನೇ ಮಹಡಿಯ ತೆರೆದ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ಚಿಣ್ಣರ ಪಾರ್ಕ್ ಗಾಗಿ 30ರಿಂದ 40 ಎಕ್ರೆ ಸ್ಥಳ ವನ್ನು ಗುರುತಿಸಲು ಕಂದಾಯ ಇಲಾಖೆಗೆ ಸೂಚಿಸಲಾಗಿದ್ದು, ಅರಣ್ಯ ಇಲಾಖೆ ಇದನ್ನು ನಿರ್ವಹಿಸಲಿದೆ ಎಂದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಅಬ್ಬಾಸ್ ಅಲಿ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹೆಚ್.ಖಾದರ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಸಂದರ್ಭದ ಅನುಸಾರ ಮಾತನಾಡಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ , ಜಿ.ಪಂ. ಸದಸ್ಯರಾದ. ಮಂಜುಳಾ ಮಾವೆ, ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್, , ತಹಶೀಲ್ದಾರ್ ಪುರಂದರ ಹೆಗ್ಡೆ, ಇಂಜಿನಿಯರ್ ನರೇಂದ್ರ ಬಾಬು ಮೊದಲಾದವರು ಉಪಸ್ಥಿತರಿದ್ದರು.