ಪುತ್ತೂರು,ಸೆ 19 (Daijiworld News/MSP): ಪುತ್ತೂರು ಹೊರವಲಯದ ಪಾಂಗಾಳಾಯಿ ಎಂಬಲ್ಲಿನ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನ ಕಾರಣ ತಿಳಿದುಬಂದಿಲ್ಲ ಪಂಗಾಳಾಯಿ ನಿವಾಸಿ ಚಂದ್ರಶೇಖರ್ ಪೂಜಾರಿ (57) ಮೃತಪಟ್ಟವರು.
ಚಂದ್ರಶೇಖರ್ ವಾಸ್ತವ್ಯವಿದ್ದ ಮನೆಯ ಕಡೆಯಿಂದ ಕಳೆದ ಮೂರು ದಿನಗಳಿಂದ ಈಚೆಗೆ ದುರ್ವಾಸನೆ ಹರಡಿದ್ದು ಕೊನೆಗೆ ಸಂಶಯಗೊಂಡ ಸ್ಥಳೀಯ ಮಹಿಳೆಯೊಬ್ಬರು ಬುಧವಾರ ಮನೆಗೆ ತೆರಳಿ ಪರಿಶೀಲಿಸಿದಾಗ ಬಾಗಿಲು ಹಾಕಿಕೊಂಡಿರುವುದು ಮತ್ತು ನೊಣಗಳು ಹಾರಾಡುತ್ತಿರುವುದು ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಗರ ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಮನೆ ಪ್ರವೇಶಿಸಿ ಪರಿಶೀಲಿಸಿದಾಗ ಮಲಗುವ ಕೊಠಡಿಯ ಮಂಚದ ಕೆಳಗಡೆ ಚಂದ್ರಶೇಖರವರ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯಾರೊಂದಿಗೂ ಬೆರೆಯದ ಅವರು ಒಂಟಿಯಾಗಿ ಬದುಕುತ್ತಿದ್ದರು ಏನನ್ನು ಕೊಟ್ಟರೂ ತಿನ್ನುತ್ತಿರಲಿಲ್ಲ. ಇದೆ 7ರಂದು ಚಂದ್ರಶೇಖರ್ ಪೂಜಾರಿಯವರು ವಾಸ್ತವ್ಯವಿದ್ದ ಮನೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಅಣ್ಣ ಪ್ರಭಾಕರ್ ಎಂಬವರು ಬಂದು ಹೋಗಿದ್ದರು ಆ ಬಳಿಕ ಚಂದ್ರಶೇಖರ್ ಅವರನ್ನು ಸ್ಥಳೀಯರು ಯಾರು ನೋಡಿಲ್ಲ ಎಂದು ಮಾಹಿತಿ ಲಭಿಸಿದೆ. ಯಾವಾಗಲೂ ಮನೆಯಲ್ಲಿ ಬಾಗಿಲು ಚಿಲಕ ಹಾಕಿ ಒಳಗಡೆ ಇರುತ್ತಿದ್ದ ಚಂದ್ರಶೇಖರ್ ಅವರು ತಮ್ಮ ಕುಟುಂಬದ ಸಹೋದರ-ಸಹೋದರಿಯರು ಬಂದಾಗ ಮಾತ್ರ ಬಾಗಿಲು ತೆಗೆಯುತ್ತಿದ್ದರು. ಇದೇ 9ರಂದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ಕಾರಣ ತಿಳಿದು ಬರಬೇಕಾಗಿದೆ