ಮಂಗಳೂರು, ಸೆ 18 (DaijiworldNews/SM): ವಿಶೇಷ ಆರ್ಥಿಕ ವಲಯದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತ ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಸ್ಟ್ ತಿಂಗಳ 19ರಂದು ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ವಿದ್ಯುತ್ ಕೆಲಸಗಳನ್ನು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುವ ಇವಿಯೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದ ವಿದ್ಯುತ್ ಗುತ್ತಿಗೆ ನಿರ್ವಹಿಸುವ ಉಪಕರಣಗಳನ್ನು ಅಲ್ಲಿಯೇ ತಾತ್ಕಾಲಿಕ ಶೆಡ್ ನಲ್ಲಿ ಬೀಗ ಹಾಕಿ ಇರಿಸಿತ್ತು.
ಆಗಸ್ಟ್ 20ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಶೆಡ್ಡಿನ ಬೀಗ ಮುರಿದು ವಿವಿಧ ಅಳತೆಯ ಒಟ್ಟು 601 ಕೇಬಲ್ ಗ್ಲಾಂಡ್ ಗಳನ್ನು ಕಳವುಗೈದಿದ್ದರು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.
ಇದೀಗ ಪ್ರಕರಣದ ಪ್ರಮುಖ ಆರೋಪಿ ವಿಜಯ ಹಾಗೂ ಪುನೀತ್ ಎಂಬವರನ್ನು ಮೆಲ್ಲಾರಿನಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಅವರಿಂದ ಸುಮಾರು 80,000 ರೂಪಾಯಿ ಮೌಲ್ಯದ 278 ಕೇಬಲ್ ಗ್ಲಾಂಡ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಶಾಂತಿಗುಡ್ಡೆಯ ಶಮೀರ್ ಎಂಬಾತನನ್ನು ಆಗಸ್ಟ್ 25ರಂದು ದಸ್ತಗರಿ ಮಾಡಿ ಆತನಿಂದ 30 ಕೇಬಲ್ ಗ್ಲಾಂಡ್ ಗಳನ್ನು ಮತ್ತು ಒಂದು ಪಿಕ್ ಅಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.