ಮಂಗಳೂರು, ಸೆ.18(Daijiworld News/SS): ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ನಡೆದ 24ನೇ ಘಟಿಕೋತ್ಸವದಲ್ಲಿ ಮಂಗಳೂರಿನ ಡಾ.ಸಫ್ವಾನ್ ಅಹ್ಮದ್ ಡಿಎಂ ನ್ಯೂರೋಲಜಿ ಪದವಿಯನ್ನು ಬೆಸ್ಟ್ ನ್ಯೂರೋಲಜಿ ರೆಸಿಡೆಂಟ್ ಗೋಲ್ಡ್ ಮೆಡಲ್ನೊಂದಿಗೆ ಪಡೆದುಕೊಂಡಿದ್ದಾರೆ.
ನಗರದ ಹೊರವಲಯದ ಗುರುಪುರ ಕೈಕಂಬದ ಅಹ್ಮದ್ ಹುಸೇನ್ ಮತ್ತು ತಸ್ಲೀಮ್ ದಂಪತಿಯ ಪುತ್ರನಾಗಿರುವ ಡಾ. ಸಫ್ವಾನ್ ಅಹ್ಮದ್, ಎಂಬಿಬಿಎಸ್ ಬಳಿಕ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡಿದ್ದು, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಮಟ್ಟದಲ್ಲಿ ಆರನೇ ಮತ್ತು ಮೈಸೂರು- ಬೆಂಗಳೂರು ವಲಯದಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಉತ್ತೀರ್ಣರಾಗಿದ್ದರು.
ಪ್ರಸ್ತುತ ಡಾ. ಸಫ್ವಾನ್ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನರರೋಗ ತಜ್ಞರಾಗಿ ಸೇವೆ ಆರಂಭಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಡಾ.ರಾಜೀವ್ ಗೌಡ, ಸಂಸ್ಥೆ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.