ಕಾಸರಗೋಡು, ಸೆ 17 (DaijiworldNews/SM): ಮಂಜೇಶ್ವರ ಮೆರ್ಸಿ ಅಮ್ಮನವರ ಇಗರ್ಜಿ ಮೇಲೆ ದಾಳಿ ನಡೆದು ಒಂದು ತಿಂಗಳು ಕಳೆದರು ಇನ್ನೂ ಆರೋಪಿಗಳನ್ನು ಬಂಧಿಸದಿರುವುದನ್ನು ಪ್ರತಿಭಟಿಸಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಕೆಥೋಲಿಕ್ ಸಭಾ ಎಚ್ಚರಿಕೆ ನೀಡಿದೆ.
ಈ ಕುರಿತು ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ಮಂಗಳೂರು ಪ್ರದೇಶ್ ಕೆಥೋಲಿಕ್ ಸಭಾ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಮಾತನಾಡಿ, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಏಳು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಒಂದು ದಿನ ಸೂಚನಾ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಬೇಡಿಕೆ ಈಡೇರಿಸಲು ಮುಂದಾಗದಿದ್ದಲ್ಲಿ ಅಮರಣಾಂತ ಉಪವಾಸ ನಡೆಸುವ ಮುನ್ನಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಸರಗೋಡು ವಲಯ ಪ್ರಧಾನ ಧರ್ಮಗುರು ಫಾ. ಜೋನ್ ವಾಸ್, ಮಂಜೇಶ್ವರ ಚರ್ಚ್ ಧರ್ಮಗುರು ಫಾ. ವಿನ್ಸೆಂಟ್ ಸಲ್ಡಾನಾ, ಪಾವೂರು ಇಗರ್ಜಿ ಧರ್ಮಗುರು ಫಾ. ವರ್ಗೀಸ್ ಚೆಕ್ಕಲ, ಕೆಥೋಲಿಕ್ ಸಭಾ ಕಾಸರಗೋಡು ವಲಯ ಅಧ್ಯಕ್ಷ ರಾಜು ಸ್ಟೀಫನ್ ಕುಂಬಳೆ, ಮೊದಲಾದವರು ಉಪಸ್ಥಿತರಿದ್ದರು.