ಉಡುಪಿ, ಸೆ 17(DaijiworldNews/SM): ಜಿಲ್ಲೆಯಲ್ಲಿ ಸೆಪ್ಟಂಬರ್ 25ರಂದು ನಡೆಯುವ ಜಂತುಹುಳು ನಿವಾರಣಾ ದಿನದಂದು 1 ರಿಂದ 19 ವರ್ಷದೊಳಗಿನ 2,67,450 ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಅಲ್ಬೇಂಡಾಝೋಲ್ ಮಾತ್ರೆ ವಿತರಿಸುವ ಗುರಿ ಹೊಂದಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖೆಗಳು 100% ಗುರಿ ಸಾಧನೆಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 63910 ಅಂಗನವಾಡಿ ಮಕ್ಕಳು, 1ರಿಂದ 10 ನೇ ತರಗತಿವರೆಗಿನ 159521 , ಪಿಯುಸಿಯ 29040, ಶಾಲೆಯಿಂದ ಹೊರಗುಳಿದಿರುವ 1829, ಡಿಪ್ಲೊಮಾದ 2210, ಐಟಿಐ ಕಾಲೇಜಿನ 1870, ನರ್ಸಿಂಗ್ ಕಾಲೇಜಿನ 1135 ಹಾಗೂ 7745 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಡಿಸಿ ಹೇಳಿದರು.
ಜಂತುಹುಳು ಸಮಸ್ಯೆಯಿಂದ ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ರಕ್ತಹೀನತೆ ಅಪೌಷ್ಠಿಕತೆ, ಓದಿನಲ್ಲಿ ಏಕಾಗ್ರತೆ ಕಡಿಮೆ, ಅನಾರೋಗ್ಯದ ಸಮಸ್ಯೆಗಳು ಬರಲಿದ್ದು, ಇದರಿಂದ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಅಲ್ಲದೇ ಅನಾರೋಗ್ಯದ ಕಾರಣ ಶಾಲೆಗೆ ಗೈರು ಹಾಜರಾಗುವುದರಿಂದ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿನ ಎಲ್ಲಾ ಸರಕಾರಿ,ಖಾಸಗಿ, ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಲ್ಲಿ ಜಂತುಹುಳು ಮಾತ್ರೆ ನೀಡಲು ಸಿದ್ದತೆ ಮಾಡಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹ ಈ ಕುರಿತು ತರಬೇತಿ ನೀಡಲಾಗಿದೆ, ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸಹ ಅಗತ್ಯ ತರಬೇತಿಯನ್ನು ಆರೋಗ್ಯ ಇಲಾಖೆಯ ಮೂಲಕ ನೀಡಲಾಗುತ್ತಿದ್ದು, ಮಾತ್ರೆಗಳನ್ನು ಸರಬರಾಜು ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಹಾಗೂ ಸುರಕ್ಷಿತ ಕೈ ತೊಳೆಯುವ ವಿಧಾನದ ಬಗ್ಗೆ ಸಹ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಡಿಸಿ ಹೇಳಿದರು.