ಉಡುಪಿ, ಸೆ 17 (DaijiworldNews/SM): ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಉಸ್ತುವಾರಿ ನೀಡದ್ದಕ್ಕೆ ಬಿಲ್ಲವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಪಕ್ಷ ಕಾಲಕಾಲಕ್ಕೆ ಕೆಲವು ನಿರ್ದೇಶನ ನೀಡುತ್ತದೆ. ಮುಖ್ಯಮಂತ್ರಿಗಳು ನನ್ನನ್ನು ಕರೆದು ಮಂತ್ರಿ ಮಾಡಿ ಖಾತೆ ಹಂಚಿಕೆಯೂ ಮಾಡಿದ್ದಾರೆ. ನನಗೆ ದ.ಕ. ಜಿಲ್ಲೆಯ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ. ಕಾರ್ಯಕರ್ತನಾಗಿ ನಿಷ್ಟೆಯಿಂದ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.
ಪಾರ್ಟಿಯ ನಿರ್ಧಾರ ಶಿರೋಮಾನ್ಯ. ಪಾರ್ಟಿ ಹಾಗೂ ಮುಖ್ಯಮಂತ್ರಿಗಳ ಆದೇಶ ವಿನಯವಾಗಿ ಸ್ವೀಕರಿಸಿದ್ದೇನೆ. ಯಾವ ನಾಯಕರು ಏನೆಲ್ಲ ಮಾತಾಡಿದ್ದಾರೆ ಏನೆಲ್ಲ ಪ್ರತಿಕ್ರಿಯೆ ನೀಡಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿ ಗಳು ಯಾರ್ಯಾರನ್ನ ಉಸ್ತುವಾರಿ ಮಾಡುತ್ತಾರೋ ಅವರನ್ನೆಲ್ಲ ಸ್ವಾಗತಿಸುತ್ತೇನೆ.
ಪೂರ್ಣಪ್ರಮಾಣದ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಕೆಲವರು ರಾಜಿನಾಮೆ ನೀಡಿ ನಮ್ಮ ಪಕ್ಷಕ್ಕೆ ಬರುವವರಿರುತ್ತಾರೆ. ಸೀಮಿತ ಅವಕಾಶ, ಬೇಡಿಕೆ ಹೆಚ್ಚಿದ್ದಾಗ ಜಿಜ್ಞಾಸೆ ಬರುತ್ತವೆ. ಜಿಜ್ಞಾಸೆ ನಿರ್ವಹಿಸಿ ಪಾರ್ಟಿ ಮುನ್ನಡೆಸುವ ಜವಾಬ್ದಾರಿ ಸಿಎಂಗಿದೆ. ಇಂತಹಾ ಸಂದರ್ಭದಲ್ಲಿ ನಾವೆಲ್ಲಾ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಬೇಕಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.