ಉಡುಪಿ, ಸೆ 17 (Daijiworld News/RD): ಜಿಲ್ಲೆಯ ಐವರು ಶಾಸಕರ ಷಡ್ಯಂತ್ರದಿಂದ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಸ್ಥಾನ ಕೈ ತಪ್ಪಿ ಹೋಗಿದೆ. ಸ್ವಾಭಿಮಾನ ಇವರಲ್ಲಿ ಇದ್ದಿದ್ದರೆ ಇದರ ವಿರುದ್ದ ದನಿ ಎತ್ತಬೇಕಿತ್ತು. ಆದರೆ ಹಾಗೆ ಮಾಡಿಲ್ಲ, ಈ ಮೂಲಕ ಬಿಲ್ಲವ ಸಮುದಾಯದವರನ್ನು ಪದೇ ಪದೇ ತುಳಿಯುವ ಹುನ್ನಾರ ನಡೆಯುತ್ತಿದೆ ಎಂದು ಬಿಲ್ಲವ ಸಮುದಾಯದ ವಿವಿಧ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ನಗರ ಸಭೆಯ ಮಾಜಿ ಅದ್ಯಕ್ಷ ಕಿರಣ್ ಕುಮಾರ್, ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಸ್ವಾಭಿಮಾನಿ ಅನ್ನುವಂತದ್ದು ಐವರು ಶಾಸಕರಿಗೆ ಇದ್ದಿದ್ದೇ ಆದರೆ ಉಸ್ತುವಾರಿಯನ್ನು ದ.ಕ ಜಿಲ್ಲೆಗೆ ಕೊಟ್ಟಿರುವುದರ ಬಗ್ಗೆ ಆಕ್ಷೇಪ ಎತ್ತಬೇಕಿತ್ತು. ಆದರೆ ಹಾಗೆ ಮಾಡಿಲ್ಲ ಬಿಲ್ಲವ ಸಮುದಾಯದವರನ್ನು ಪದೇ ಪದೇ ತುಳಿಯುವ ಹುನ್ನಾರ ನಡೆಯುತ್ತಿದೆ. ಇದರಿಂದ ಉಡುಪಿ ಜಿಲ್ಲೆಗೆ ಆದ ಅವಮಾನ. ಸ್ವಾಭಿಮಾನಕ್ಕಿಂತ ರಾಜಕೀಯ ಮಿಗಿಲಲ್ಲ' ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷರಾದ ಅಚ್ಚುತ್ ಅಮೀನ್ ಕಲ್ಮಾಡಿ ಮಾತನಾಡಿ, 'ಉಡುಪಿ ಜಿಲ್ಲೆಗೆ ಕೋಟಾ ಪೂಜಾರಿಯವರಿಗೆ ಉಸ್ತುವಾರಿ ಸ್ಥಾನ ಕೊಡಬಾರದು ಎಂಬಂತೆ ಷಡ್ಯಂತ್ರ ನಡೆದಿದೆ. ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ತವರು ಜಿಲ್ಲೆಯವರಾದರೆ ಶ್ರೀನಿವಾಸ ಪೂಜಾರಿಯವರು, ಉಡುಪಿಯ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ ಹಾಗಾಗಿ ಅವರಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದರೆ ಹೆಚ್ಚಿನ ಕೆಲಸ ಮಾಡಬಹುದು ಎಂದರು.
ರಾಜ್ಯದ ಮುಖ್ಯಮಂತ್ರಿಯವರಿಗೆ ಜಿಲ್ಲೆಯ ಶಾಸಕರಿಂದ ಪತ್ರ ಹೋಗಿರುವ ಮಾಹಿತಿ ಇದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದೆ ನಾವು ರಾಜ್ಯದ 10 ರಾಜಕೀಯ ನಾಯಕರುಗಳನ್ನು ಭೇಟಿ ಮಾಡಿ ಮತ್ತೆ ಉಡುಪಿಗೆ ಪೂಜಾರಿಯವರನ್ನು ಉಸ್ತುವಾರಿಯನ್ನಾಗಿ ಮಾಡುವಂತೆ ಒತ್ತಾಯಿಸುತ್ತೇವೆ. ಕಳೆದ 10-12 ತಿಂಗಳು ಉಸ್ತುವಾರಿಯಾಗಿ ಕೆಲಸ ಮಾಡಿರುವುದನ್ನು ಸರಕಾರ ಗಮನಿಸಬೇಕು. ಇದರಲ್ಲಿ ಏನೂ ಬದಲಾವಣೆ ಆಗದಿದ್ದರೆ, 19 ತಾರೀಕು ಮತ್ತೆ ಸಭೆ ಕರೆದು ಮುಂದಿನ ನಡೆಯನ್ನು ತೀರ್ಮಾನಿಸುತ್ತೆವೆ ಎಂದು ಅಚ್ಚುತ ಕಲ್ಮಾಡಿ ತಿಳಿಸಿದರು.
ಬಿ ಎನ್ ಶಂಕರ್ ಪೂಜಾರಿ, ಅಧ್ಯಕ್ಷರಾದ ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಮಾತನಾಡಿ, 'ಉಡುಪಿ ಜಿಲ್ಲೆಯ ಐವರು ಶಾಸಕರು ಇದರ ಬಗ್ಗೆ ಸರಕಾರಕ್ಕೆ ಒತ್ತಾಯಿಸಬೇಕು. ದ.ಕ ಜಿಲ್ಲೆಗೆ ಉಸ್ತುವನ್ನಾಗಿ ಮಾಡಿದ್ದು ಬಿಲ್ಲವ ಸಮಾಜಕ್ಕೆ ಅವಮಾನ. ಪೂಜಾರಿಯವರಿಗೆ ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಸಾಮಾರ್ಥ್ಯವಿದೆ. ಇಲ್ಲಿನ ಶಾಸಕರಲ್ಲೇ ಒಬ್ಬರು ಉಸ್ತುವಾರಿಯಾಗಿದ್ದರೆ ಆಕ್ಷೇಪವಿರುತ್ತಿರಲಿಲ್ಲ. ಏನೇ ಆಗಲಿ ಕೋಟಾ ಅವರು ಮತ್ತೆ ಉಡುಪಿಗೆ ಉಸ್ತುವಾರಿಯಾಗಿ ಬರಬೇಕು ಎಂದು ಒತ್ತಾಯಿಸಿದರು.
ನವೀನ್ ಅಮೀನ್, ಶಂಕರಪುರ ಬಿಲ್ಲವ ಪರಿಷತ್ ಜಿಲ್ಲ ಅಧ್ಯಕ್ಷ, ಪ್ರವೀಣ್ ಪೂಜಾರಿ, ಅಧ್ಯಕ್ಷರು, ಬಿಲ್ಲವ ಯುವವೇದಿಕೆ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.