ಮಂಗಳೂರು, ಸೆ 16 (Daijiworld News/RD): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಿರಿಯ ನಾಗರಿಕರಿಗೆ ಮತ್ತು ಮನೆಯಲ್ಲಿ ಒಂಟಿಯಾಗಿ ವಾಸವಾಗಿರುವ ವೃದ್ಧೆಯರಿಗೆ ವಿಶೇಷ ಭದ್ರತೆ ನೀಡಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.
ಎಲ್ಲಾ ಪೊಲೀಸರು ಇನ್ಮುಂದೆ ತಮ್ಮ ಬೀಟ್ ಅವಧಿಯಲ್ಲಿ ರಾತ್ರಿ ವೇಳೆ ಒಂಟಿಯಾಗಿರುವ ವೃದ್ಧೆಯರ ಮನೆಗೆ ಮೇಲೆ ವಿಶೇಷ ನಿಗಾ ಇಟ್ಟು ಕರ್ತವ್ಯ ನಿರ್ವಹಿಸುತ್ತಾ ಅವರಿಗೆ ಭದ್ರತೆ ನೀಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 242 ಮಂದಿ ಮಹಿಳಾ ವೃದ್ಧೆಯರು ಒಂಟಿಯಾಗಿ ವಾಸಿಸುತ್ತಿರುವುದನ್ನು ಬೀಟ್ ಪೊಲೀಸರು ಗುರುತಿಸಿದ್ದಾರೆ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಒಂಟಿ ವೃದ್ಧೆಯರ ಮನೆಗಳಿಗೆ ಭೇಟಿ ನೀಡಿ ಅವರಲ್ಲಿ ಧೈರ್ಯ ತುಂಬಿ ಸುರಕ್ಷತಾ ಭಾವನೆಯನ್ನು ಮೂಡಿಸಲಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಅಲ್ಲದೆ ಸರಕಾರಿ ಇಲಾಖೆಯಿಂದ ಅವರಿಗೆ ಏನಾದರೂ ನೆರವು ಬೇಕಾಗಿದ್ದಲ್ಲಿ ಪೊಲೀಸರು ಅದನ್ನೂ ಮಾಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರ ಜೊತೆಗೆ ಯಾವ ರೀತಿ ಸ್ಪಂದಿಸಬೇಕು ಎಂಬ ಬಗ್ಗೆ ಪೊಲೀಸರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.