ಬೆಂಗಳೂರು, ಸೆ14: ಖ್ಯಾತ ಸಾಹಿತಿ, ವಿಚಾರವಾದಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ತನಿಖಾ ತಂಡ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಖ್ಯಾತ ಸಾಹಿತಿ ಪಿ ಲಂಕೇಶ್ ಅವರ ನಿರ್ಗಮನದ ನಂತರ ಜನಪ್ರಿಯ ಲಂಕೇಶ್ ಪತ್ರಿಕೆಯನ್ನು ಮುಂದುವರೆಸುವ ವಿಚಾರವಾಗಿ ಇಂದ್ರಜಿತ್ ಹಾಗೂ ಗೌರಿ ಲಂಕೇಶ್ ನಡುವೆ ಜಗಳವಾಗಿತ್ತು. ಗೌರಿ ಲಂಕೇಶ್ ಅವರಿಗೆ ಇಂದ್ರಜಿತ್ ಅವರು ಪಿಸ್ತೂಲ್ ತೋರಿಸಿ 2005ರಲ್ಲಿ ಬೆದರಿಕೆ ಹಾಕಿದ್ದರು. ಈ ವಿಚಾರವಾಗಿ ವಿಶೇಷ ತನಿಖಾ ದಳದ ಅಧಿಕಾರಿಗಳು ಇಂದ್ರಜಿತ್ ಅವರಿಂದ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಇಂದ್ರಜಿತ್ ಲಂಕೇಶ್ ತಮ್ಮ ಬಳಿ ಇದ್ದ ಗನ್ ಅನ್ನು ಈಗಾಗಲೇ ಮಾರಾಟ ಮಾಡಿದ್ದು, ಮಾರಾಟ ಮಾಡಿರುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿದ್ದಾರೆ. ವಿಶೇಷ ತನಿಖಾ ದಳದ ಅಧಿಕಾರಿಗಳು ಇಂದ್ರಜಿತ್ ಅವರನ್ನು ವಿಚಾರಣೆಗೆ ಒಳಪಡಿಸುವಾಗ, ಅಧಿಕಾರಿಗಳ ವಿರುದ್ಧ ಕೂಗಾಡಿದ ಪ್ರಸಂಗವೂ ನಡೆಯಿತು. ಆದರೆ ಅಧಿಕಾರಿಗಳು ವಿಚಾರಣೆ ನಡೆಸುವುದು ನಮ್ಮ ಕರ್ತವ್ಯದ ಒಂದು ಭಾಗ ಎಂದು ಇಂದ್ರಜಿತ್ ಲಂಕೇಶ್ ಅವರಲ್ಲಿ ಹೇಳಿದ್ದಾರೆ.