ಉಳ್ಳಾಲ, ಸೆ 15(DaijiworldNews/SM): ಶಂಕಿತ ಡೆಂಗ್ಯೂ ಮಹಾಮಾರಿಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಘಟನೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಡೆದಿದೆ. ಇಲ್ಲಿನ ಭಟ್ನಗರ ನಿವಾಸಿ ಹರ್ಷಿತ್ ಗಟ್ಟಿ(23) ಮೃತ ಯುವಕ.
ಡೆಂಗ್ಯೂ, ಪ್ಲೇಗ್ ನಿಂದ ಹರ್ಷಿತ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹರೀಶ್ ಗಟ್ಟಿ ಹಾಗೂ ಮಮತಾ ಗಟ್ಟಿಯವರ ಪುತ್ರ ಹರ್ಷಿತ್ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಒಂದು ದಿನದ ಅಂತರದಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ದಿನಗಳ ಹಿಂದೆಯಷ್ಟೇ ಉದ್ಯಮಿಯೊಬ್ಬರು ಶಂಕಿತ ಡೆಂಗ್ಯೂ ಮಹಾಮಾರಿಗೆ ಬಲಿಯಾದ್ದರು.