ಮಂಗಳೂರು, ಸೆ 14 (Daijiworld News/RD): ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಗುತ್ತಿರುವ ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮವನ್ನು ಹಿಂಸಾತ್ಮಕ ಮತ್ತು ಭಾರತೀಯ ಸಂಸ್ಕೃತಿಯನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ಸತೀಶ ಕೋಚರೆಕರ ನೆಟ್ ಫ್ಲಿಕ್ಸ್ ನ ವಿರುದ್ಧ ಸೈಬರ್ ಅಪರಾಧ ತನಿಖಾ ವಿಭಾಗಕ್ಕೆ ದೂರು ನೀಡಿದ್ದಾರೆ.
ನೆಟ್ ಫ್ಲಿಕ್ಸ್ ಮಾಧ್ಯಮದಿಂದ ಹಿಂದೂ ಧರ್ಮವನ್ನು ಹಿಂಸಾತ್ಮಕ ಮತ್ತು ಭಾರತೀಯ ಸಂಸ್ಕೃತಿಯನ್ನು ಅಶ್ಲೀಲವಾಗಿ ತೋರಿಸಿ, ಜಗತ್ತಿನಾದ್ಯಂತ ಭಾರತೀಯ ಸಂಸ್ಕೃತಿಯ ಮೇಲೆ ತಿರಸ್ಕಾರದ ಭಾವನೆ ಮೂಡಿಸುವಂತಹ ಹುನ್ನಾರ ನಡೆಯುತ್ತಿದೆ. ಇದರಿಂದ ಅನೇಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಆದುದರಿಂದ ‘ನೆಟಫ್ಲಿಕ್ಸ್’ ಕಂಪನಿ ಮತ್ತು ಅದರ ಮಾಲೀಕರು, ಮುದ್ರಕರು, ವಿತರಕರು, ಕಲಾವಿದರು, ಅಧಿಕಾರಿಗಳ ಮೇಲೆ ಅಪರಾಧವನ್ನು ದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ‘ನೆಟಫ್ಲಿಕ್ಸ್’ನ ಪ್ರಸಾರವನ್ನು ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ. ಈ ಬಗ್ಗೆ ಮುಂಬೈ ಪೊಲೀಸ್ ಆಯುಕ್ತರು ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೂ ದೂರನ್ನು ಸಲ್ಲಿಸಲಾಗಿದೆ.
‘ನೆಟಫ್ಲಿಕ್ಸ್’ನಲ್ಲಿಯ ‘ಲೈಲಾ’ ಈ ಮಾಲಿಕೆಯಲ್ಲಿ ‘ಆರ್ಯ’ ಈ ಹಿಂದೂ ನಟನನ್ನು ಅತ್ಯಂತ ಕ್ರೂರ ಹಾಗೂ ಆಕ್ರಮಣಕಾರಿಯಾಗಿ ಬಿಂಬಿಸಲಾಗಿದ್ದು ‘ಆರ್ಯವರ್ತ’ನನ್ನು ತರಲು ಪ್ರಯತ್ನಿಸಲಾಗುತ್ತಿದೆ ಎಂಬಂತೆ ತೋರಿಸಲಾಗಿದೆ. ‘ಸೆಕ್ರೆಡ್ ಗೇಮ್’ ಮಾಲಿಕೆಯಲ್ಲಿ ಜಗತ್ತಿನಲ್ಲಿ ನಡೆಯುವ ಎಲ್ಲ ಅಪರಾಧ, ಕೆಟ್ಟ ಘಟನೆಗಳಿಗೆ ಹಿಂದೂಗಳು ಹೇಗೆ ಹೊಣೆಯಾಗಿದ್ದಾರೆ, ಎಂಬುದನ್ನು ತೋರಿಸಲಾಗಿದೆ. ‘ಫೈಯರ್’ ಈ ವೆಬ್ಸಿರಿಸ್ನಲ್ಲಿ ಅಣ್ಣ-ತಮ್ಮಂದಿರ ಹೆಂಡತಿಯರಲ್ಲಿ ಸಲಿಂಗ ಸಂಬಂಧವನ್ನು ತೋರಿಸಿ ಗೌರವಯುಕ್ತ ಸಂಬಂಧವನ್ನು ಅಶ್ಲೀಲ ಹಾಗೂ ಭೀಭತ್ಸ ರೂಪದಲ್ಲಿ ತೋರಿಸಲಾಗಿದೆ. ‘ಸೆಕ್ರೆಡ್ ಗೇಮ್ 2 ಜಿ’ ಹಾಗೂ ‘ಸೆಕ್ರೆಡ್ ಗೇಮ್ ಸೆಶನ್ 2’ ರಲ್ಲಿ ಮಹಾನ ಭಾರತೀಯ ಸಂಸ್ಕೃತಿಯಲ್ಲಿನ ಗುರು-ಶಿಷ್ಯ ಈ ಪವಿತ್ರ ಸಂಬಂಧವನ್ನು ಅಶ್ಲೀಲವಾಗಿ ತೋರಿಸಿ ಸಮಸ್ತ ಹಿಂದೂ ಬಾಂಧವರ ಧಾರ್ಮಿಕ ಭಾವನೆಯನ್ನು ಉದ್ದೇಶಪೂರ್ವಕವಾಗಿ ನೋಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.