ಮಂಗಳೂರು, ಡಿ 29: ನಗರದ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಸುವ ವಿಷಯ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೆ ಸಿಎಂ ಅವರಿಗೆ ಯುವಕರ ಗುಂಪಿನಿಂದ ಪತ್ರ ಕಳುಹಿಸಲಾಗಿದೆ.
ಮೇಯರ್ ಹಾಗೂ ಮುಜರಾಯಿ ಇಲಾಖೆಗೆ ಸ್ಥಳೀಯರಾದ ಬ್ಲೇನಿ ಡಿಸೋಜ ಎಂಬವರು ಆಕ್ಷೇಪಣಾ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿತ್ತು. ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಸುವುದರಿಂದ ಪರಿಸರವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದರು.
ಇದೀಗ ಜಾತ್ಯಾತೀತ ಕನ್ನಡಿಗರು ಎಂದು ಕರೆಸಿಕೊಂಡಿರುವ ಯುವಕರ ಗುಂಪು ಕುಡ್ಲ ಸಂಸ್ಕೃತಿ ರಕ್ಷಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
ಮಾನ್ಯರೇ,
ಮಂಗಳೂರು ಕದ್ರಿ ಗ್ರಾಮದಲ್ಲಿರುವ ಶ್ರೀಮಂಜುನಾಥ ದೇವಸ್ಥಾನವು ಸುಮಾರು ಹತ್ತು ಶತಮಾನಗಳಷ್ಟು ಪುರಾತನ ದೇವಸ್ಥಾನವಾಗಿದ್ದು ಸದರಿ ದೇವಾಲಯದಲ್ಲಿ ಸಾವಿರಾರು ವರ್ಷಗಳಿಂದ ನಿತ್ಯವೂ ಪೂಜೆ, ಪುನಸ್ಕಾರ, ಮಂತ್ರಘೋಷ, ಮಹಾ ಮಂಗಳಾರತಿ, ಘಂಟಾ ನಾದಗಳು ಮೊಳಗುತ್ತಿವೆ. ಮೊಸರು ಕುಡಿಕೆ, ದೀಪಾವಳಿ, ಭಜನೆ, ನೇಮ ವಾರ್ಷಿಕ ಜಾತ್ರೆ, ಯಕ್ಷಗಾನ ಮುಂತಾದವುಗಳೂ ತಲೆತಲಾಂತರದಿಂದ ನಡೆದುಕೊಂಡುಬರುತ್ತಿವೆ. ಆದರೆ ಆ ನಂತರದಲ್ಲಿ ಸದರಿ ದೇವಾಲಯವಿರುವ ಕದ್ರಿ ಗ್ರಾಮಕ್ಕೆ ಎಲ್ಲಿಂದಲೋ ಕೆಲವು ಕ್ರಿಶ್ಚಿಯನ್ ಸಮುದಾಯದವರು ಬಂದು ನೆಲೆಸಿರುತ್ತಾರೆ.
ಅವರುಗಳು ಏಕದೇವೋಪಾಸಕರಾಗಿರುವುದರಿಂದಾಗಿ ಹಿಂದೂ ದೇವರುಗಳಿಗೆ ನಡೆಯುವ ಹಲವಾರು ಬಗೆಯ ಪೂಜೆ ಪುನಸ್ಕಾರಗಳು ಕಿರಿಕಿರಿಯನ್ನುಂಟುಮಾಡುತ್ತಿದೆಯಷ್ಟೇ ಅಲ್ಲದೇ ಕೆಲವು ವಿಶೇಷ ದಿನಗಳಲ್ಲಿ ಎಂದರೆ ಮೊಸರು ಕುಡಿಕೆ, ದೀಪಾವಳಿ, ಭಜನೆ, ನೇಮ, ವಾರ್ಷಿಕ ಜಾತ್ರೆ, ಯಕ್ಷಗಾನ ಮುಂತಾದವುಗಳು ನಡೆಯುವ ಸಮಯದಲ್ಲಿ ತೀವ್ರ ತರದ ತೊಂದರೆಯಾಗುವುದುಂಟು.
ಕೆಲವೊಮ್ಮೆ ಧ್ವನಿವರ್ಧಕದಿಂದ ಹೊರಬರುವ ದೇವರ ನಾಮಗಳ ಶಬ್ದದಿಂದಾಗಿ ಅವರ ಕಿವಿಯ ತಮಟೆಯನ್ನಷ್ಟೇ ಅಲ್ಲದೇ ಎದೆಯನ್ನೂ ಸೀಳಿ ಹೃದಯವನ್ನೇ ಸ್ತಂಭನಗೊಳಿಸಿಬಿಡುತ್ತದೆ. ಆದುದರಿಂದ ದೇವಾಲಯ ನಿರ್ಮಾಣವಾಗಿ ಹಲವಾರು ಶತಮಾನಗಳ ನಂತರ ಎಲ್ಲಿಂದಲೋ ಅಲ್ಲಿಗೆ ಬಂದು ದೇವಾಲಯದ ಸುತ್ತ ಮುತ್ತ ನೆಲೆಸಿರುವ ಕ್ರಿಶ್ಚಿಯನ್ ಧರ್ಮದವರನ್ನು ಆದಷ್ಟು ಬೇಗ ಅಲ್ಲಿಂದ ಬಹು ದೂರದ ಜಾಗಗಳಿಗೆ ಸ್ಥಳಾಂತರಿಸಿ ಅವರ ಪ್ರಾಣಗಳನ್ನು ಕಾಪಾಡುವುದರ ಜೊತೆಗೆ ಸಾವಿರಾರು ವರ್ಷಗಳ ಪುರಾತನ ದೇವಾಲಯದಲ್ಲಿ ನಡೆಯುತ್ತಿರುವ ಆಚರಣೆಗಳು ನಿರಾತಂಕವಾಗಿ ನೆರವೇರಲು ಅವಕಾಶ ಮಾಡಿಕೊಡಬೇಕೆಂದು ಎಲ್ಲಾ ಜಾತ್ಯತೀತ ಮನಸ್ಸುಗಳ ಪರವಾಗಿ ಕೋರುತ್ತಿದ್ದೇವೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಪ್ರವೀಣ್ ಕುಮಾರ್ ಮಾವಿನಕಾಡು ಮತ್ತು ಅಪಾರ ಜಾತ್ಯತೀತ ಕನ್ನಡಿಗರು.
ಈ ರೀತಿ ಪತ್ರ ಬರೆದು ಕುಡ್ಲದ ಸಂಸ್ಕೃತಿಯನ್ನು ಉಳಿಸಿಕೊಡುವಂತೆ ಜಾತ್ಯತೀತ ಕನ್ನಡಿಗರ ಗುಂಪು ಪತ್ರದಲ್ಲಿ ಮನವಿ ಮಾಡಿದ್ದಾರೆ.