ಪುತ್ತೂರು, ಸೆ 14 (Daijiworld News/RD): ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಪ್ರಕರಣದಲ್ಲಿ ಬಂಧಿತರಾಗಿದ್ದ ಐವರು ಆರೋಪಿಗಳ ಜಾಮೀನು ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾನ್ಯಾಯಾಲಯ ತಿರಸ್ಕರಿಸಿದೆ.
ನಗರದ ಖಾಸಗಿ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಬಜತ್ತೂರು ಗ್ರಾಮದ ಗಾಣದ ಮೂಲೆ ನಿವಾಸಿ ಗುರುನಂದನ್(19), ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ನಿವಾಸಿಗಳಾದ ಪ್ರಜ್ವಲ್ (19), ಕಿಶನ್(19), ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸುನಿಲ್(19), ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಪ್ರಖ್ಯಾತ್(19) ಎಂಬ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಅಧಿಕಾರಿ ಅಭಿ ಯೋಜಕಿ ಕೃಷ್ಣವೇಣಿ ವಾದಿಸಿದ್ದರು.
ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ಈ ಐವರು ಕಳೆದ ಫೆಬ್ರವರಿ ತಿಂಗಳಲ್ಲಿ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯನ್ನು ನಗರದ ಹೊರವಲಯದ ಕಟಾರ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕರದೊಯ್ದು ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಈ ದುಷ್ಕೃತ್ಯವನ್ನು ಮೊಬೈಲ್ನಲ್ಲಿಚಿತ್ರೀಕರಿಸಿಕೊಂಡಿದ್ದಲ್ಲದೆ, ಅದನ್ನು ಜುಲೈ ಆರಂಭದಲ್ಲಿಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಇದು ವೈರಲ್ ಆಗುತ್ತಲೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದರು.