ಮಂಗಳೂರು, ಸೆ.13(Daijiworld News/SS): ಕೆಲ ತಿಂಗಳ ಹಿಂದೆ ಎಸ್.ಜೆ. ಶಶಾಂಕ್ ಆಚಾರ್ಯ ಅವರ ಕೈಚಳಕದಿಂದ ಮೂಡಿಬಂದ ತುಳುನಾಡಿನ ಪ್ರಸಿದ್ಧ ದೈವ ಸ್ವಾಮಿ ಕೊರಗಜ್ಜನ ಮುಖವರ್ಣಿಕೆಯನ್ನು ಬಿಂಬಿಸುವ ವೆಕ್ಟರ್ ಪೈಂಟಿಂಗ್ ಕರಾವಳಿಯಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದು, ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿತ್ರವನ್ನು ನಿರ್ಮಿಸಿ ಶಶಾಂಕ್ ಆಚಾರ್ಯ ಸುದ್ದಿಯಲ್ಲಿದ್ದಾರೆ.
ಕಲಾವಿದ - ಎಸ್.ಜೆ. ಶಶಾಂಕ್ ಆಚಾರ್ಯ
ಕರಾವಳಿ ಮೂಲದ ಕಲಾವಿದ ಎಸ್.ಜೆ. ಶಶಾಂಕ್ ಆಚಾರ್ಯ ಈ ಹಿಂದೆ ಕೊರಗಜ್ಜನ ಚಿತ್ರ ನಿರ್ಮಿಸಿ ಅನೇಕರಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಇದೀಗ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು ಅವರ ಮುಖವರ್ಣಿಕೆಯ ವೆಕ್ಟರ್ ಪೈಯ್ಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಕಾರ್ ಸ್ಟ್ರೀಟ್ನಲ್ಲಿ ಡಿಸೈನ್ ಸ್ಟುಡಿಯೋ ಹೊಂದಿರುವ ಎಸ್ ಜೆ ಶಶಾಂಕ್ ಆಚಾರ್ಯ ವೆಕ್ಟರ್ ಆರ್ಟ್ನಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಪೂರ್ಣಗೊಳಿಸಲು ತೆಗೆದುಕೊಂಡಿರುವುದು ಕೇವಲ ಒಂದು ದಿನ ಮಾತ್ರ ಎಂಬುದು ವಿಶೇಷ.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಘೋಷಣೆಯ ಮೂಲಕ ಸಾಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದ ಸಮಾಜ ಸುಧಾರಕ ನಾರಾಯಣ ಗುರು ಓರ್ವ ಮಹಾನ್ ಸಂತ. ಇವರು ಉತ್ತಮ ಜೀವನ ಮೌಲ್ಯಗಳನ್ನು ಜನತೆಯ ಹೃದಯಾಂತರಾಳದಲ್ಲಿ ಬಿತ್ತಿದವರು. ಇಂತಹ ಮಹಾಪುರುಷನ ವೆಕ್ಟರ್ ಆರ್ಟ್ ಅನ್ನು ರಚಿಸಬೇಕು ಎಂಬ ಆಸೆ ಬಹುದಿನದಿಂದ ಇತ್ತು. ಮಾತ್ರವಲ್ಲ, ಈ ಹಿಂದೆ ಬಿಡಿಸಿದ್ದ ಕೊರಗಜ್ಜನ ಚಿತ್ರ ನೋಡಿದ ಬಳಿಕ ಮಂಗಳೂರಿನ ಅನೇಕ ಜನ ನಾರಾಯಣ ಗುರುಗಳ ಚಿತ್ರವನ್ನು ರಚಿಸಲು ಹೇಳಿದ್ದರು. ಹೀಗಾಗಿ ಚಿತ್ರವನ್ನು ರಚಿಸಿದೆ ಎನ್ನುತ್ತಾರೆ ಶಶಾಂಕ್ ಆಚಾರ್ಯ.