ಮಂಗಳೂರು ಡಿ28: ನಗರದ ಕಾರ್ಸ್ಟ್ರೀಟ್ನಲ್ಲಿರುವ ಎಂ. ಸಂಜೀವ ಶೆಟ್ಟಿ ಬಟ್ಟೆ ಮಳಿಗೆ, ಕಿನ್ನಿಗೋಳಿಯ ಶ್ರೀ ರಾಜಶ್ರೀ ಜ್ಯುವೆಲ್ಲರಿ ಹಾಗೂ ಮುಲ್ಕಿಯ ಉದ್ಯಮಿ ನಾಗರಾಜ್ ಎಂಬವರ ಮನೆ ಮೇಲೆ ಇತ್ತೀಚೆಗೆ ನಡೆದಿರುವ ಶೂಟೌಟ್ ಕೃತ್ಯದ ಹಿಂದೆ ಭೂಗತ ಪಾತಕಿ ಕಲಿ ಯೋಗೀಶನ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಈ ಮೂರು ಶೂಟೌಟ್ ಪ್ರಕರಣಗಳನ್ನು ಭೇದಿಸುವಲ್ಲಿ ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಂತೆ, ಭೂಗತ ಪಾತಕಿ ಕಲಿ ಯೋಗೀಶನ ಇಬ್ಬರು ಸಹಚರರಾದ ಮುಲ್ಕಿಯ ಚಿತ್ರಾಪುವಿನ ಮನೋಜ್ ಕುಂದರ್(35) ಹಾಗೂ ಪಕ್ಷಿಕೆರೆಯ ಚಂದ್ರಶೇಖರ್(32) ಎಂಬ ಆರೋಪಿಗಳನ್ನು ಡಿ.28ರ ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಭೂಗತ ಪಾತಕಿ ಕಲಿ ಯೋಗೀಶನ ಜತೆಗೆ ಮನೋಜ್ ಎಂಬ ಆರೋಪಿ ನೇರ ಸಂಪರ್ಕದಲ್ಲಿದ್ದು, ಈತನ ಆದೇಶದಂತೆ ಈ ಮೂರು ಶೂಟೌಟ್ ಪ್ರಕರಣಕ್ಕೆ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಆಶ್ಚರ್ಯವೆಂದರೆ, ಮನೋಜ್ ಈ ಹಿಂದೆ ಭಾರತೀಯ ಸೇನೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದು, ಅಲ್ಲಿ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಬಂದು ಇಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದ. ಆದೇರೀತಿ, ಈತನ ಜತೆಗೆ ಶೂಟೌಟ್ಗೆ ಸಾಥ್ ನೀಡಿರುವ ಚಂದ್ರಶೇಖರ್ ಕೂಡ ಕೂಲಿ ಕೆಲಸ ಮಾಡುತ್ತಿದ್ದು, ಈ ಇಬ್ಬರು ಆರೋಪಿಗಳು ಕೂಡ ಭೂಗತ ಪಾತಕಿ ಕಲಿ ಯೋಗೀಶನ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುವುದಕ್ಕೆ ಯತ್ನಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಬಂಧಿತ ಇಬ್ಬರು ಆರೋಪಿಗಳ ಬಳಿಯಿಂದ ಎರಡು ಪಿಸ್ತೂಲ್, ಏಳು ಸಜೀವ ಮದ್ದುಗುಂಡು ಹಾಗೂ ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮನೋಜ್ ಮತ್ತು ಚಂದ್ರಶೇಖರ್ನನ್ನು ಪೊಲೀಸರು ಮುಲ್ಕಿಯ ಚಿತ್ರಾಪುವಿನಲ್ಲಿ ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳ ಬಂಧನದ ಮೂಲಕ ಮಂಗಳೂರು ಪೊಲೀಸರು, ಭೂಗತ ಪಾತಕಿ ಕಲಿ ಯೋಗೀಶ್ ಜತೆಗೆ ನೇರ ಸಂಪರ್ಕ ಹೊಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯಮಿಗಳಿಂದ ಹಫ್ತಾ ವಸೂಲಿಗೆ ಬೆದರಿಕೆ ಹಾಕುತ್ತಿದ್ದ ಮಹತ್ವದ ಪ್ರಕರಣವೊಂದನ್ನು ಭೇದಿಸಿರುವುದು ಗಮನಾರ್ಹ. ಈ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಿದ ಬಳಿಕವಷ್ಟೇ ಭೂಗತ ಪಾತಕಿ ಕಲಿ ಯೋಗೀಶ್ ಇನ್ನೆಷ್ಟು ಮಂದಿಗೆ ಬೆದರಿಕೆ ಆಥವಾ ಹಫ್ತಾ ವಸೂಲಿ ಮಾಡುತ್ತಿದ್ದ ಮತ್ತು ಸ್ಥಳೀಯವಾಗಿ ಯಾರೊಂದಿಗೆಲ್ಲ ಸಂಪರ್ಕವಿಟ್ಟುಕೊಂಡು ಸಂಚು ರೂಪಿಸುತ್ತಿದ್ದ ಎಂಬುದು ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.