ಮಂಗಳೂರು, ಸೆ 13 (Daijiworld News/MSP): ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಡೆಗಳಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್ಗಳ ಯೋಜನಾ ವೆಚ್ಚ ಅಧಿಕವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸಂಸದ ನಳಿನ್ಕುಮಾರ್ ಕಟೀಲ್ ಸೂಚಿಸಿದರು.
ಗುರುವಾರ ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 27 ಬಸ್ ನಿಲ್ದಾಣಗಳ ನಿರ್ಮಾಣವನ್ನು ಕೈಗೆತ್ತಿಕ್ಕೊಳ್ಳಲಾಗಿದೆ. ಕೆಲವು ಬಸ್ ನಿಲ್ದಾಣಗಳು ಈಗಾಗಲೇ ನಿರ್ಮಾಣವಾಗಿದೆ ಆದರೆ ಆಶ್ಚರ್ಯವೆಂದರೆ ಸ್ಮಾರ್ಟ್ ಸಿಟಿಯಡಿ ಪ್ರತಿಯೊಂದು ಬಸ್ ಶೆಲ್ಟರ್ಗೆ ರೂ.12 ಲಕ್ಷ ವೆಚ್ಚ ಮಾಡಲಾಗಿದೆ. ಇಷ್ಟೊಂದು ದುಬಾರಿಯಾಗಿ ನಿರ್ಮಾಣವಾಗಿರುವ ಆದರೆ ಈ ಬಸ್ ಶೆಲ್ಟರ್ನ ವಿನ್ಯಾಸವೇ ಅವೈಜ್ಞಾನಿಕವಾಗಿದೆ. ಅಲ್ಲದೇ ನಕ್ಷೆಯಲ್ಲಿ ವಿಸ್ತೀರ್ಣ 600 ಚದರ ಅಡಿಯಿದೆ ಎಂದು ತಿಳಿಸಲಾಗಿದೆ. ಆದರೆ ನಿಜವಾಗಿ ನೋಡಿದಾಗ ಬಸ್ ನಿಲ್ದಾಣ ಅಷ್ಟೊಂದು ವಿಸ್ತೀರ್ಣ ಕಂಡು ಬರುತ್ತಿಲ್ಲ. ದೆಹಲಿಯಲ್ಲಿ ಕೇವಲ 6 ಲಕ್ಷದಲ್ಲಿ ಇಂತಹ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.
ವಾಸ್ತವಿಕ ವೆಚ್ಚಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚು ವೆಚ್ಚವನ್ನು ತೋರಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ, ಇಷ್ಟೊಂದು ಅಪಾರ ವೆಚ್ಚ ಮಾಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಸ್ಮಾರ್ಟ್ ಸಿಟಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಅವರಿಗೆ ಸೂಚಿಸಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ನಗರದ ಹಂಪನಕಟ್ಟೆ ಕ್ಲಾಕ್ ಟವರ್ ನಿರ್ಮಾಣವನ್ನು 1 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಅದೂ ಅವೈಜ್ಞಾನಿಕವಾಗಿದ್ದು, ಇದರಿಂದ ಮುಂದಿನ ದಿನದಲ್ಲಿ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ ಎಂದರು.