ಉಡುಪಿ, ಸೆ 12 (DaijiworldNews/SM): ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್ನಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರನ್ನು ಸ್ಥಳಾಂತರ ಮಾಡಲಾಗಿದೆ.
ಮೂಲತಃ ಗದಗದವರಾಗಿರುವ ಏಳು ಜನ ಕೂಲಿ ಕಾರ್ಮಿಕರು, ಐದು ಮಂದಿ ಮಕ್ಕಳನ್ನು ರಕ್ಷಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಮತ್ತು ನಗರ ಪೊಲೀಸ್ ಠಾಣೆ, ಉಡುಪಿ ಇವರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಅವರಲ್ಲಿ 2 ಮಕ್ಕಳು ಕಾಡಬೆಟ್ಟು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಮಕ್ಕಳು ರಸ್ತೆ ಬದಿಯಲ್ಲಿ ಆಟವಾಡಲು ಬರುತ್ತಿದ್ದು, ವಾಹನ ಸಂಚಾರದ ವೇಳೆ ಆಕಸ್ಮಾತ್ತಾಗಿ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಅಲ್ಲಿಂದ ಬೇರೆ ಕಡೆ ಟೆಂಟ್ ಗಳನ್ನು ವರ್ಗಾಯಿಸುವಂತೆ ಸೂಚಿಸಿ, ಅವರಿಗೆ ಅನುಕೂಲಕರ ಮತ್ತು ಮಕ್ಕಳ ರಕ್ಷಣೆ ಹಿನ್ನೆಲೆಯಲ್ಲಿ ನಿಟ್ಟೂರಿನಲ್ಲಿ ರಸ್ತೆಗೆ ಸ್ವಲ್ಪ ದೂರವಿರುವ ಜಾಗದಲ್ಲಿ ಟೆಂಟ್ ಗಳನ್ನು ಕಟ್ಟಿಕೊಳ್ಳುವಂತೆ ಸ್ಥಳವನ್ನು ತೋರಿಸಿ, 3 ದಿನಗಳ ಕಾಲಾವಕಾಶವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ದಯಾನಂದ ಮತ್ತು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜಿಕ ಕಾರ್ಯಕರ್ತರಾದ ಯೋಗೀಶ್ ಹಾಗೂ ಗ್ಲೀಶಾ ಮೊಂತೆರೋ ಹಾಗೂ ಉಡುಪಿ ನಗರ ಠಾಣೆಯ ಪೊಲೀಸ್ ಜಿ.ಎಸ್ ಶಿವಮಠ್ ಭಾಗವಹಿಸಿದ್ದರು.