ಬಂಟ್ವಾಳ, ಸೆ 11 (DaijiworldNews/SM): ದ.ಕ. ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿದ್ದರು. ಜಿಲ್ಲೆಯ ಎಲ್ಲಾ ವರ್ಗದ ಜನರನ್ನು ಸಮಾನ ಮನೋಭಾವದಿಂದ ನೋಡುತ್ತಿದ್ದರು. ಅವರ ರಾಜೀನಾಮೆ ನಮಗೆ ಆಘಾತವನ್ನುಂಟುಮಾಡಿದ್ದು ಅವರು ತನ್ನ ನಿರ್ಧಾರವನ್ನು ವಿಮರ್ಶಿಸಿ ರಾಜಿನಾಮೆಯನ್ನು ಹಿಂಪಡೆದುಕೊಳ್ಳಬೇಕೆಂದು ದ.ಕ. ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟೀಸ್ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಆಗ್ರಹಿಸಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವೇದನಾಶೀಲ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಬಡವರನ್ನು, ದಲಿತರನ್ನು ತನ್ನ ಪಕ್ಕ ಕುಳ್ಳಿರಿಸಿ ಸಾವಧಾನವಾಗಿ ಅವರ ಅಹವಾಲನ್ನು ಆಲಿಸುತ್ತಿದ್ದರು. ಸಮಸ್ಯೆಯನ್ನು ಪರಿಹರಿಸಿ ಕೊಡುತ್ತಿದ್ದರು. ಮಾತ್ರವಲ್ಲದೆ ಆತ್ಮಸೈರ್ಯವನ್ನು ತುಂಬುತ್ತಿದ್ದರು. ನಿಷ್ಟಕ್ಷಪಾತವಾದ ಅಧಿಕಾರಿಗಳಿಗೆ ಬಾಹ್ಯ ಒತ್ತಡಗಳಿರುವುದು ಸಾಮಾನ್ಯ. ದಕ್ಷ, ಪ್ರಾಮಾಣಿಕ ಅಧಿಕರಿಗಳು ಕರ್ತವ್ಯದಿಂದ ವಿಮುಖರಾಗಬಾರದು. ಆತುರದ ನಿರ್ಧಾರ ಕೈಗೊಳ್ಳಬಾರದು ಇದರಿಂದ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದಿದ್ದಾರೆ.
ದಕ್ಷ ಅಧಿಕಾರಿಗಳೇ ರಾಜೀನಾಮೆ ನೀಡಿದರೆ, ಆ ಸ್ಥಾನವನ್ನು ತುಂಬುವವರು ಯಾರು ಎಂದು ಪ್ರಶ್ನಿಸಿದರು. ಸಸಿಕಾಂತ್ ಸೆಂಥಿಲ್ ಮಾತ್ರವಲ್ಲದೆ ಅನೇಕ ಅಧಿಕಾರಿಗಳು ಇಂದು ಉಸಿರು ಕಟ್ಟಿಸುವ ವಾತವಾರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ರಾಘವೇಂದ್ರ ಸುರುಳಿಮೂಲೆ, ಕೃಷ್ಣಪ್ಪ ಪುದ್ದೋಟ್ಟು, ರಾಮ ತುಂಬೆ, ನಾರಾಯಣ ನಂದಾವರ ಉಪಸ್ಥಿತರಿದ್ದರು.